ಬೆಂಗಳೂರು,ನ.1-ನಗರದಲ್ಲಿ ಪ್ರತಿ ದಿನ ಒಂದಲ್ಲಾ ಒಂದು ಕಡೆ ರೋಡ್ ರೇಜ್ ಪ್ರಕರಣಗಳು ನಡೆಯುತ್ತಿವೆ. ನಗರದ ಟಿನ್ ಫ್ಯಾಕ್ಟರಿ ಬಳಿ ಇಂತಹದೊಂದು ಘಟನೆ ನಡೆದಿದ್ದು, ದಾರಿಯಲ್ಲಿ ಸೈಡ್ ಕೊಡುವ ವಿಚಾರಕ್ಕೆ ಕ್ಯಾಬ್ ಚಾಲಕ ಹಾಗೂ ಬೈಕ್ ಸವಾರನ ನಡುವೆ ಗಲಾಟೆಯಾಗಿದೆ.
ಬೈಕ್ ಸವಾರ ಸ್ವಲ್ಪ ಮುಂದೆ ಹೋಗಿ ಕ್ಯಾಬ್ ಚಾಲಕನಿಗೆ ಪ್ರಶ್ನೆ ಮಾಡಿದಾಗ ಕೋಪಗೊಂಡ ಕ್ಯಾಬ್‌ಚಾಲಕ ಕಾರಿನಿಂದ ಬೈಕ್‌ಗೆ ಗುದ್ದಿಸಿ ಸವಾರನನ್ನು ಬೀಳಿಸಿ ಹೋಗಿರುವುದು ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಕಾರೊಂದರ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ಕ್ಯಾಬ್ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಆತನ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಹಿಂದೆ ಬೆಂಗಳೂರು ದಕ್ಷಿಣ ವಿಭಾಗದ ಪುಟ್ಟೇನಹಳ್ಳಿ ಸೇರಿದಂತೆ ನಗರದ ಮತ್ತಿತರ ಪ್ರದೇಶಗಳಲ್ಲೂ ರೋಡ್‌ರೇಜ್ ಪ್ರಕರಣಗಳು ನಡೆದಿದ್ದವು.
ಅ.27ರಂದು ರಾತ್ರಿ ವೇಳೆ ಕಾರಿನ ಸೈಡ್ ಮಿರರ್‌ಗೆ ಬೈಕ್ ಡಿಕ್ಕಿ ಹೊಡೆದ ಘಟನೆ ನಂತರ ಕಾರಿನಲ್ಲಿದ್ದವರು ಬೈಕ್ ಸವಾರರನ್ನು ಬೆನ್ನತ್ತಿ ಹೋಗಿ ಡಿಕ್ಕಿ ಹೊಡೆದಿದ್ದ ಪರಿಣಾಮ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಅದೇ ರೀತಿ ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ತಾಗಿದ ವಿಚಾರದಲ್ಲಿ ಸಾಫ್‌್ಟವೇರ್ ಎಂಜಿನಿಯರ್ ಒಬ್ಬರ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದರಿಂದ ಅವರು ಗಾಯಗೊಂಡಿದ್ದರು.
