ಬೆಂಗಳೂರು,ಏ.2- ಕ್ಲಬ್‌ವೊಂದಕ್ಕೆ ನುಗ್ಗಿದ ಡಕಾಯಿತರು ಇಸ್ಪೀಟ್ ಆಡುತ್ತಿದ್ದವರಿಗೆ ಚಾಕು, ಮಾರಕಾಸ್ತ್ರಗಳಿಂದ ಬೆದರಿಸಿ ಪಣಕ್ಕೆ ಇಟ್ಟಿದ್ದ ಹಣ ಸೇರಿದಂತೆ 10 ಲಕ್ಷ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸ ತೊಡಕು ಹಾಗೂ ರಂಜಾನ್ ಹಬ್ಬದಂದು ಸಂಜೆ 7ಗಂಟೆ ಸುಮಾರಿನಲ್ಲಿ ಹತ್ತನ್ನೆರಡು ಮಂದಿ ಸೇರಿಕೊಂಡು ಯಾರಬ್ ನಗರ ಮುಖ್ಯರಸ್ತೆಯಲ್ಲಿರುವ ಕ್ಲಬ್‌ನ ರೂಂನಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಆಡುತ್ತಿದ್ದರು.
ಆ ಸಂದರ್ಭದಲ್ಲಿ ಐದಾರು ಮಂದಿ ಡಕಾಯಿತರು ಮಾರಕಾಸ್ತ್ರಗಳನ್ನು ಹಿಡಿದು ಏಕಾಏಕಿ ಕ್ಲಬ್ ರೂಂ ಒಳಗೆ ನುಗ್ಗಿ ಅಲ್ಲಿದ್ದವರಿಗೆ ಚಾಕು, ಮಾರಕಾಸ್ತ್ರಗಳಿಂದ ಬೆದರಿಸಿ ಪಣಕ್ಕೆ ಇಟ್ಟಿದ್ದ ಹಣ ಹಾಗೂ ಆಟವಾಡುತ್ತಿದ್ದವರ ಬಳಿ ಇದ್ದಂತಹ ಹಣವನ್ನೆಲ್ಲಾ ಕಿತ್ತುಕೊಂಡು ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಡಕಾಯಿತರು ಸುಮಾರು 10 ಲಕ್ಷಕ್ಕೂ ಹೆಚ್ಚು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಬನಶಂಕರಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕ್ಲಬ್ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಡಕಾಯಿತರ ಪತ್ತೆಗೆ ಬಲೆ ಬೀಸಿದ್ದಾರೆ.