ನವದೆಹಲಿ,ಡಿ.27- ಅಕ್ರಮ ಹಣ ವರ್ಗಾವಣೆ ಪ್ರಕರಣದ ಮಧ್ಯವರ್ತಿಯಾಗಿರುವ ಸಂಜಯ್ ಭಂಡಾರಿ ಅವರ ಲಂಡನ್ ನಿವಾಸದಲ್ಲಿ ಸೋನಿಯಾಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರು ವಾಸ್ತವ್ಯ ಹೂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಭಂಡಾರಿ ಅವರಿಗೆ ಸೇರಿದ ಲಂಡನ್ ನಿವಾಸವನ್ನು ನವೀಕರಿಸಿ ವಾದ್ರಾ ಅವರು ಅಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಇಡಿ ತಿಳಿಸಿದೆ.
ಭಂಡಾರಿ 2016 ರಲ್ಲಿ ಯುಕೆಗೆ ಪಲಾಯನ ಮಾಡಿದರು ಮತ್ತು ಇಡಿ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಮಾಡಿದ ಕಾನೂನು ವಿನಂತಿಯ ಮೇರೆಗೆ ಈ ವರ್ಷದ ಜನವರಿಯಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟಿಷ್ ಸರ್ಕಾರ ಅನುಮೋದನೆ ನೀಡಿತು.
ಎರಡು ಫೆಡರಲ್ ಏಜೆನ್ಸಿಗಳು ವಿದೇಶದಲ್ಲಿ ಬಹಿರಂಗಪಡಿಸದ ಆಸ್ತಿಗಳನ್ನು ಹೊಂದಿರುವ ಉದ್ಯಮಿಯ ವಿರುದ್ಧ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆಯ ಆರೋಪಗಳನ್ನು ತನಿಖೆ ನಡೆಸುತ್ತಿವೆ. ಈ ಪ್ರಕರಣದಲ್ಲಿ ಫೆಡರಲ್ ಏಜೆನ್ಸಿ ವಾದ್ರಾ ಅವರನ್ನು ಹೆಸರಿಸಿರುವುದು ಇದೇ ಮೊದಲು ಎನ್ನಲಾಗಿದೆ.
ಯುಎಇ ಮೂಲದ ಎನ್‍ಆರ್‍ಐ ಉದ್ಯಮಿ ಸಿ ಸಿ ಅಥವಾ ಚೆರುವತ್ತೂರು ಚಾಕುಟ್ಟಿ ಥಂಪಿ ಮತ್ತು ಯುಕೆ ಪ್ರಜೆ ಸುಮಿತ್ ಚಡ್ಡಾ ವಿರುದ್ಧ ಈ ಪ್ರಕರಣದಲ್ಲಿ ಹೊಸ ಚಾರ್ಜ್ ಶೀಟ್ ಸಲ್ಲಿಸಿರುವುದಾಗಿ ಇಡಿ ಹೇಳಿಕೆ ನೀಡಿದೆ.
ಜನವರಿ 2020 ರಲ್ಲಿ ಈ ಪ್ರಕರಣದಲ್ಲಿ ಥಂಪಿ ಅವರನ್ನು ಬಂಧಿಸಲಾಯಿತು ಹಾಗೂ ಅವರು ವಾದ್ರಾ ಅವರ ಆಪ್ತ ಸಹಚರ ಎಂದು ಇಡಿ ಆರೋಪಿಸಿದೆ. ಥಂಪಿ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.
ಕುಸ್ತಿಪಟುಗಳನ್ನು ಭೇಟಿಯಾದ ರಾಹುಲ್‍ಗಾಂಧಿ
ಸಂಜಯ್ ಭಂಡಾರಿ ಅವರು ಈ ಕೆಳಗಿನ ಆಸ್ತಿಗಳನ್ನು ಒಳಗೊಂಡಂತೆ ಹಲವಾರು ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳನ್ನು ಲಂಡನ್‍ನ ನಂ 12 ಬ್ರಿಯಾನ್‍ಸ್ಟನ್ ಸ್ಕ್ವೇರ್ ಮತ್ತು 6 ಗ್ರೋಸ್ವೆನರ್ ಹಿಲ್ ಕೋರ್ಟ್ ಎಂಬ ಆಸ್ತಿ ಹೊಂದಿದ್ದಾರೆ. ಈ ಆಸ್ತಿಗಳು ಪಿಎಂಎಲ್‍ಎ ನಿಬಂಧನೆಗಳ ಪ್ರಕಾರ ಅಪರಾಧದ ಆದಾಯವಾಗಿದೆ ಮತ್ತು ಸಿ ಸಿ ಥಂಪಿ ಮತ್ತು ಸುಮಿತ್ ಚಡ್ಡಾ ಈ ಅಪರಾಧದ ಆದಾಯವನ್ನು ಮರೆಮಾಚುವಿಕೆ ಮತ್ತು ಬಳಕೆಯಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಿದೆ ಎಂದು ಇಡಿ ಆರೋಪಿಸಿದೆ.
ರಾಬರ್ಟ್ ವಾದ್ರಾ ಲಂಡನ್‍ನ 12 ಬ್ರಿಯಾನ್‍ಸ್ಟನ್ ಸ್ಕ್ವೇರ್‍ನಲ್ಲಿರುವ ಮೇಲೆ ಹೇಳಿದ ಆಸ್ತಿಯನ್ನು ಸುಮಿತ್ ಚಡ್ಡಾ ಮೂಲಕ ನವೀಕರಿಸಿದ್ದು ಮಾತ್ರವಲ್ಲದೆ ಅಲ್ಲೇ ವಾಸ್ತವ್ಯ ಹೂಡಿದ್ದಾರೆ ಎನ್ನುವುದು ಇಡಿ ವಾದವಾಗಿದೆ. ರಾಬರ್ಟ್ ವಾದ್ರಾ ಹಾಗೂ ಸಿ ಸಿ ಥಂಪಿ ಫರಿದಾಬಾದ್‍ನಲ್ಲಿ (ದೆಹಲಿ ಬಳಿ) ದೊಡ್ಡ ಪ್ರಮಾಣದ ಭೂಮಿಯನ್ನು ಖರೀದಿಸಿದ್ದಾರೆ ಮತ್ತು ಪರಸ್ಪರ ಹಣಕಾಸಿನ ವಹಿವಾಟು ನಡೆಸಿದ್ದಾರೆ ಎಂದು ಇಡಿ ಹೇಳಿಕೊಂಡಿದೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ವಾದ್ರಾ ಅವರನ್ನು ಈ ಹಿಂದೆ ಇಡಿ ಪ್ರಶ್ನಿಸಿತ್ತು ಹಾಗು ಅವರು ತಪ್ಪನ್ನು ನಿರಾಕರಿಸಿದ್ದರು. ನವೆಂಬರ್ 22 ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‍ಎ) ಕ್ರಿಮಿನಲ್ ಸೆಕ್ಷನ್‍ಗಳ ಅಡಿಯಲ್ಲಿ ಸಲ್ಲಿಸಲಾದ ಪೂರಕ ಪ್ರಾಸಿಕ್ಯೂಷನ್ ದೂರನ್ನು ದೆಹಲಿ ನ್ಯಾಯಾಲಯವು ಡಿಸೆಂಬರ್ 22 ರಂದು ಪರಿಗಣಿಸಿದೆ ಎಂದು ಇಡಿ ಹೇಳಿದೆ.