ಸಿರಿಗೆರೆ,ಸೆ.20- ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ದಶಕಗಳ ಕಾಲ ಜೀವಿಸಿದ್ದ ಬಸಮ್ಮ, ಅಕ್ಕಮಹಾದೇವಿ ಮತ್ತು ಭವಾನಿ ಗೌರಿ ಹೆಸರಿನ ಅನೆಗಳ ಅಗಲಿಕೆಯ ನಂತರ ಉಂಟಾಗಿರುವ ನಿರ್ವಾತ ತುಂಬಲು ಸದ್ಯದಲ್ಲೇ ಮತ್ತೊಂದು ಆನೆ ಬರಲಿದೆ.
ತಂತ್ರಜ್ಞಾನದಿಂದ ಸೃಷ್ಟಿಯಾಗಿರುವ ಈ ರೋಬೋ ಆನೆಗೆ ಶಿವಕುಂಜರ ಎಂದು ನಾಮಕರಣ ಮಾಡಲಾಗಿದೆ. ಮಠದಲ್ಲಿದ್ದ ಆನೆಗಳಂತೆಯೇ ಇದು ಕೂಡ ಸೂಚಿಸುವ ಕೆಲಸಗಳನ್ನು ಮರುಯೋಚಿಸದೆ ಮಾಡುತ್ತದೆ. ಕಣ್ಣುಗಳನ್ನು ಅರಳಿಸಿ ದಿಟ್ಟಿಸುತ್ತದೆ. ತಲೆ ಅಲ್ಲಾಡಿಸಿ ಬೇಕುಬೇಡಗಳ ಸಂಜ್ಞೆ ಮಾಡುತ್ತದೆ.
ಅಗಲವಾದ ತನ್ನ ಕಿವಿಗಳನ್ನು ಬೀಸುತ್ತದೆ. ಬಾಲ ಅಲ್ಲಾಡಿಸುತ್ತಾ, ತನ್ನ ಉದ್ದನೆಯ ಸೊಂಡಿಲಿನಿಂದ ನೀರು ಚಿಮ್ಮಿಸುತ್ತದೆ. ಜನರನ್ನು ಬೆನ್ನ ಮೇಲೆ ಕುಳ್ಳಿರಿಸಿಕೊಂಡು ಸವಾರಿ ಮಾಡಿಸುತ್ತಾ ನೈಜ ಆನೆಯ ಅನುಭವವನ್ನು ನೀಡುತ್ತದೆ.
ಇದೇ ಸೆಪ್ಟೆಂಬರ್ 22ರಿಂದ 24ರವರೆಗೆ ಸಿರಿಗೆರೆಯಲ್ಲಿ ನಡೆಯಲಿರುವ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ಧಾಂಜಲಿ ಸಮಾರಂಭದಲ್ಲಿ ಶಿವಕುಂಜರ ವಿಶೇಷ ಆಕರ್ಷಣೆಯಾಗಿಲಿದೆ.
ಮೂರು ಮೀಟರ್ ಎತ್ತರ ಹಾಗೂ ಅಂದಾಜು 800 ಕೆ.ಜಿ. ತೂಕದ ಈ ಆನೆಯನ್ನು ದೆಹಲಿ ಮೂಲದ ಸೆಕೆಂಡ್ ಚಾನ್ಸ್ ಅಡಾಪ್ಸನ್ ಸೆಂಟರ್ (ಸಿಯುಪಿಎ) ಮತ್ತು ಪೀಪಲ್ ಫಾರ್ ದಿ ಎಥಿಕಲ್ ಟ್ರೇಟ್‌ಮೆಂಟ್ ಆಫ್ ಅನಿಮಲ್ಸ್ (ಪಿಇಟಿಎ) ತಯಾರಿಸಿ ತರಳಬಾಳು ಮಠಕ್ಕೆ ಕೊಡುಗೆಯಾಗಿ ನೀಡಲು ಮುಂದಾಗಿವೆ.
ಹೊಸ ಅತಿಥಿಗೆ ಶಿವಕುಂಜರ ಎಂದು ನಾಮಕರಣ ಮಾಡಲಾಗಿದೆ. ಮಠದ ಧಾರ್ಮಿಕ ಮತ್ತು ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲಿ ಆನೆ ಮೆರುಗು ತರಲಿದೆ. ಮಠದಲ್ಲಿ ನಡೆಯುವ ಶ್ರದ್ದಾಂಜಲಿ ಕಾರ್ಯಕ್ರಮ ಮತ್ತು ಹಾಗೂ ರಾಜ್ಯದ ನಾನಾ ಕಡೆ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವಗಳಲ್ಲಿ ಇದು ಪ್ರಮುಖ ಆಕರ್ಷಣೆ ಆಗುವ ಸಾಧ್ಯತೆ ಇದೆ.
ಪ್ರಾಣಿಗಳು ಅನುಭವಿಸುವ ಹಿಂಸೆ, ದೈಹಿಕ ಮತ್ತು ಮಾನಸಿಕ ವೇದನೆಯ ಅರಿವು ಇದೆ. ಈ ಕಾರಣಕ್ಕೆ ರೋಬೊ ಆನೆಗಳನ್ನು ಸೃಷ್ಟಿಸಿ ನೀಡುತ್ತಿದ್ದೇವೆ ಎಂದು ಅನುಕ್ಷಾಯಾದವ್, ಯೋಜನೆ ಸಹಾಯಕಿ, ಪಿಇಟಿಎ ಇಂಡಿಯಾ ತಿಳಿಸಿದ್ದಾರೆ.ಬಸಮ್ಮ, ಅಕ್ಕಮಹಾದೇವಿ, ಭವಾನಿ, ಗೌರಿ ಹೆಸರಿನ ಆನೆಗಳುಮಠದ ಚಟುವಟಿಕೆಗಳಲ್ಲಿ ದಣಿವರಿಯದೇ ಪಾಲ್ಗೊಂಡಿದ್ದವು. ಶಿವಕುಂಜರ ಅವುಗಳ ಸ್ಥಾನ ತುಂಬಲಿದೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.