ಮೈಸೂರು,ಡಿ.3- ಫೆಂಗಲ್ ಚಂಡಮಾರುತದ ಪ್ರಭಾವ ನಗರಕ್ಕೆ ವ್ಯಾಪಕವಾಗಿ ತಟ್ಟಿದ್ದು, ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಚಾಮುಂಡಿ ಬೆಟ್ಟದಲ್ಲಿ ಬೃಹತ್ ಕಲ್ಲುಬಂಡೆಯೊಂದು ಉರುಳಿಬಿದ್ದಿದೆ.
ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ರಾತ್ರಿ ಸಮಯದಲ್ಲಿ ಬೃಹತ್ ಬಂಡೆಯೊಂದು ಉರುಳಿಬಿದ್ದಿದೆ. ಒಂದು ವೇಳೆ ಬೆಳಗಿನ ಸಮಯದಲ್ಲಿ ವಾಹನಗಳು ಸಂಚರಿಸಬೇಕಾದರೆ ಬಂಡೆ ಉರುಳಿದ್ದರೆ ತೊಂದರೆಯಾಗುತ್ತಿತ್ತು. ಇಂದು ಬೆಳಿಗ್ಗೆ ಬಂಡೆಯನ್ನು ಗಮನಿಸಿದ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಬಂಡೆಯನ್ನು ಪಕ್ಕಕ್ಕೆ ಸರಿಸಿದ್ದಾರೆ.
ಸರಸ್ವತಿಪುರಂನಲ್ಲಿ ಎರಡು ಮರಗಳು ಕಾರಿನ ಮೇಲೆ ಮುರಿದುಬಿದ್ದ ಪರಿಣಾಮ ಜಖಂ ಆಗಿದೆ. ಜೋರಾಗಿ ಮಳೆ ಬಾರದಿದ್ದರೂ ಸಹ ಜಿಟಿಜಿಟಿ ಮಳೆಯಿಂದಾಗಿ ಮೈಸೂರಿನಲ್ಲಿ ಸಾಕಷ್ಟು ತೊಂದರೆಗಳನ್ನು ತಂದೊಡ್ಡಿದೆ.
ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಮಳೆ ಬಂದಾಗಲೆಲ್ಲಾ ಬಂಡೆಗಳು ಉರುಳಿಬೀಳುತ್ತವೆ. ಶಾಶ್ವತವಾಗಿ ಬಂಡೆಗಳು ರಸ್ತೆಗೆ ಉರುಳಿ ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಪ್ರವಾಸಿಗರು ಮನವಿ ಮಾಡಿದ್ದಾರೆ.