ಬೆಂಗಳೂರು, ಫೆ.27- ಹಳೆ ದ್ವೇಷ ಹಾಗೂ ರಾಜಕೀಯ ವೈಷಮ್ಯದಿಂದ ನಡು ರಸ್ತೆಯಲ್ಲೇ ರೌಡಿ ಹೈದರಾಲಿಯನ್ನು ಕೊಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೌಡಿಗಳು ಸೇರಿದಂತೆ ಏಳು ಮಂದಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಶೋಕನಗರದ ರೌಡಿ ನಯಾಜ್ ಪಾಷ ಮತ್ತು ಶಿವಮೊಗ್ಗದ ರೌಡಿ ರಿಜ್ವಾನ್ ಸೇರಿ ಏಳು ಮಂದಿಯನ್ನು ಬಂಧಿಸಿರುವ ಪೊಲೀಸರು, ಉಳಿದವರಿಗಾಗಿ ಶೋಧ ಮುಂದುವರೆಸಿದ್ದಾರೆ.
ಶಾಸಕ ಹ್ಯಾರಿಸ್ ಅವರ ನಿಕಟ ವರ್ತಿಯಾಗಿದ್ದ ಹೈದರಾಲಿ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ್ದ. ಇವರ ಅಣ್ಣ ಕಾಂಗ್ರೆಸ್ ಮುಖಂಡರಾಗಿದ್ದು, ಮುಂದಿನ ಬಿಬಿಎಂಪಿ ಚುನಾವಣೆಗೆ ಟಿಕೆಟ್ ಸಿಗುವ ಸಾಧ್ಯತೆಯಿತ್ತು.
ಚುನಾವಣೆ ವೇಳೆ ಹೈದರಾಲಿ ಇದ್ದರೆ, ತಮಗೆ ತೊಂದರೆಯಾಗುತ್ತದೆಂದು ಭಾವಿಸಿ ಈತನ ಕೊಲೆಗೆ ಎಂಟತ್ತು ಮಂದಿ ಸಂಚು ರೂಪಿಸಿದ್ದರು. ಕಳೆದ ಶನಿವಾರ ರಾತ್ರಿ ಪಬ್ವೊಂದಕ್ಕೆ ಹೋಗಿದ್ದ ಹೈದರಾಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಮಧ್ಯರಾತ್ರಿ 1.15ರ ಸುಮಾರಿಗೆ ಸ್ನೇಹಿತನ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ಹೊಂಚು ಹಾಕಿ ಕುಳಿತಿದ್ದ 8-10 ಮಂದಿಯ ಗುಂಪು ಏಕಾಏಕಿ ದಾಳಿ ಮಾಡಿತ್ತು.
ಮೊದಲು ಕಾರಿನಿಂದ ಬೈಕ್‌ಗೆ ಗುದ್ದಿಸಿ ಹೈದರಾಲಿಯನ್ನು ಕೆಳಗೆ ಬೀಳಿಸಿ ನಂತರ ಏಕಾಏಕಿ ಮಚ್ಚು, ಲಾಂಗ್‌ಗಳಿಂದ ಹಲ್ಲೆ ನಡೆಸಿ ನಡುರಸ್ತೆಯಲ್ಲೇ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿತ್ತು.
ಅಶೋಕ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಹಲವು ಮಾಹಿತಿಗಳನ್ನು ಕಲೆಹಾಕಿ ಇಬ್ಬರು ರೌಡಿಗಳು ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಮುಂದುವರೆಸಿದ್ದಾರೆ.