ಬೆಂಗಳೂರು,ಫೆ.23– ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಅವರ ಬೆಂಬಲಿಗ, ರೌಡಿ ಹೈದರ್ ಅಲಿ ಎಂಬಾತನನ್ನು ಮಧ್ಯರಾತ್ರಿ ನಡುರಸ್ತೆಯಲ್ಲೇ ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ.
ದಾಳಿಯನ್ನು ತಡೆಯಲು ಯತ್ನಿಸಿದ ಹೈದರ್ ಅಲಿ ಸ್ನೇಹಿತನ ಮೇಲೆಯೂ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆನೆಪಾಳ್ಯ ನಿವಾಸಿ ಹೈದರ್ ಅಲಿ (38) ನಿನ್ನೆ ರಾತ್ರಿ ರೆಸಿಡೆನ್ಸಿ ರಸ್ತೆಯ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಸ್ನೇಹಿತರ ಜೊತೆಗೂಡಿ ಪಾರ್ಟಿ ಮಾಡಿದ್ದಾನೆ.
ಜೆ.ಪಿ.ನಗರದಲ್ಲಿ ಜಿಮ್ ಒಂದರ ಮಾಲೀಕನೂ ಆಗಿರುವ ಸ್ನೇಹಿತ ತಡರಾತ್ರಿ 1.15 ರ ಸುಮಾರಿಗೆ ಹೈದರ್ ಅಲಿಯನ್ನು ಆನೆಪಾಳ್ಯದಲ್ಲಿರುವ ಅವರ ಮನೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದ.
ಆಗ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳ ಗುಂಪು ಶಾಂತಿನಗರದ ಫುಟ್ಬಾಲ್ ಆಟದ ಮೈದಾನದ ಗೇಟ್ ಮುಂಭಾಗದಲ್ಲಿ ಹೈದರ್‌ಅಲಿ ಮತ್ತು ಸ್ನೇಹಿತ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಕೆಳಗೆ ಬೀಳಿಸಿದ್ದಾರೆ.
ತಕ್ಷಣ ಏಳೆಂಟು ಮಂದಿಯ ಗುಂಪು ಹೈದರ್ ಅಲಿ ಮೇಲೆ ಮಚ್ಚು, ಲಾಂಗ್‌ಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಚ್ಚಿ ಪರಾರಿಯಾಗಿದೆ. ಹಲ್ಲೆ ತಡೆಯಲು ಯತ್ನಿಸಿದ ಹೈದರ್ ಅಲಿ ಸ್ನೇಹಿತನ ಮೇಲೂ ಗುಂಪು ಹಲ್ಲೆ ಮಾಡಿದೆ.
ದಾಳಿಯಿಂದ ಗಾಯಗೊಂಡ ಹೈದರ್ ಅಲಿಯನ್ನು ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿತ್ತು. ಆ ವೇಳೆಗಾಗಲೇ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು.
ಹೈದರ್ ಅಲಿ ಅಶೋಕ ನಗರ ಪೊಲೀಸ್ ಠಾಣೆಯ ರೌಡಿಶೀಟರ್. ಈತನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ಮಾರಣಾಂತಿಕ ಹಲ್ಲೆ, ಹಲ್ಲೆ ಸೇರಿದಂತೆ 11 ಪ್ರಕರಣಗಳು ದಾಖಲಾಗಿವೆ.
2014 ರಿಂದಲೂ ರೌಡಿಶೀಟರ್ ಆಗಿದ್ದ ಈತನ ವಿರುದ್ಧ 2022 ರಲ್ಲಿ ಕೊನೆಯ ಬಾರಿಗೆ ಪ್ರಕರಣ ದಾಖಲಾಗಿತ್ತು. ಮಾದಕದ್ರವ್ಯಗಳಿಗೆ ಸಂಬಂಧಪಟ್ಟಂತೆ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಯಾವುದೇ ರೌಡಿ ಗುಂಪಿನ ಜೊತೆ ಗುರುತಿಸಿಕೊಂಡಿರುವ ಬಗ್ಗೆ ಈವರೆಗೂ ಮಾಹಿತಿ ಇಲ್ಲ ಎಂದು ಹೇಳಲಾಗಿದೆ.
ಹೈದರ್ ಅಲಿ ಅವರ ಸಹೋದರ ಕಾಂಗ್ರೆಸ್‌ನಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದು ಖುದ್ದು ಹೈದರ್ ಅಲಿ ಕೂಡ 2023ರ ವಿಧಾನಸಭಾ ಚುನಾವಣೆಯಲ್ಲಿ ಎನ್.ಎ.ಹ್ಯಾರಿಸ್ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಬೆಂಬಲಿಗರ ದಾಂಧಲೆ : ಹೈದರ್ ಅಲಿ ಮೇಲೆ ದಾಳಿಯಾಗಿ ಆತ ಮೃತಪಟ್ಟಿದ್ದಾನೆ ಎಂಬ ಸುದ್ದಿ ಹರಡುತ್ತಿದ್ದಂತೆ ಅಶೋಕನಗರ ಹಾಗೂ ಆನೆಪಾಳ್ಯ ಮುಂತಾದ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಬೆಂಬಲಿಗರು ಬೌರಿಂಗ್ ಆಸ್ಪತ್ರೆಯ ಮುಂದೆ ಜಮಾಯಿಸಿ ಮಚ್ಚು, ಲಾಂಗುಗಳನ್ನು ಪ್ರದರ್ಶನ ಮಾಡಿದ್ದಾರೆ. ತಕ್ಷಣವೇ ಪೊಲೀಸರು ಮಧ್ಯಪ್ರವೇಶ ಮಾಡಿದ್ದು, ಗುಂಪನ್ನು ಚದುರಿಸಿದ್ದಾರೆ.
ಪರಿಸ್ಥಿತಿ ಹತೋಟಿಯಲ್ಲಿದ್ದು, ಆರೋಪಿಗಳ ಬಂಧನಕ್ಕೆ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ನಿನ್ನೆ ರಾತ್ರಿಯಿಂದಲೇ ಪೊಲೀಸರು ಆರೋಪಿಗಳ ಬೆನ್ನತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲನೆ ನಡೆಸಿದ್ದಾರೆ.ಕ್ರೈಂ ಸೀನ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.ಹೈದರ್ ಅಲಿಯ ಸ್ನೇಹಿತನ ಹೇಳಿಕೆ ಆಧರಿಸಿ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಸಲಾಗಿದೆ.