Friday, April 4, 2025
Homeಬೆಂಗಳೂರುಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಸ್ನೇಹಿತನನ್ನೇ ಕೊಂದ ರೌಡಿ

ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಸ್ನೇಹಿತನನ್ನೇ ಕೊಂದ ರೌಡಿ

ಬೆಂಗಳೂರು, ಆ.3- ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಸ್ನೇಹಿತನ ಜತೆ ಜಗಳವಾಡಿದ ರೌಡಿ ತನ್ನ ಸಹಚರನೊಂದಿಗೆ ಸೇರಿ ಆತನ ಮೇಲೆ ಮಚ್ಚು, ಲಾಂಗ್‌ನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಸಿದ್ದಾಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ದಯಾನಂದನಗರ ಸ್ಲಂ ನಿವಾಸಿ ಸೈಯದ್‌ ಇಸಾಕ್‌ (31) ಕೊಲೆಯಾದ ದುರ್ದೈವಿ.ಗಾಡ್ರಾಜ್‌ ಬೀರು ಅಂಗಡಿಯಲ್ಲಿ ಸೈಯದ್‌ ಇಸಾಕ್‌ ಕೆಲಸ ಮಾಡುತ್ತಿದ್ದನು. ರೌಡಿ ಸಿಕ್ಕಿದರೆ ಹೊಡಿತೀನಿ ಎಂದು ಗೆಳೆಯರೊಂದಿಗೆ ಇಸಾಕ್‌ ಹೇಳಿಕೊಂಡಿದ್ದನಂತೆ. ಈ ವಿಷಯ ಆತನಿಗೆ ಗೊತ್ತಾಗಿದೆ.

ನಿನ್ನೆ ರಾತ್ರಿ 11 ಗಂಟೆ ಸುಮಾರಿನಲ್ಲಿ ಸೈಯದ್‌ ಇಸಾಕ್‌ ನಡೆದು ಹೋಗುತ್ತಿದ್ದಾಗ ರೌಡಿ ಎದುರಾಗಿದ್ದಾನೆ. ಆ ವೇಳೆ ನೀನು ನನಗೆ ಹೊಡೆಸ್ತೀನಿ ಅಂದಿದ್ದಂತೆ. ಈಗ ನಾನು ಎದುರಿಗೆ ಬಂದಿದ್ದೇನೆ ಹೊಡಿ ಬಾ ಎಂದು ಆತನನ್ನು ಚೇಡಿಸಿ ಜಗಳವಾಡಿದ್ದಾನೆ.

ಆ ಸಂದರ್ಭದಲ್ಲಿ ಸ್ಥಳೀಯರು ಜಗಳ ಬಿಡಿಸಿ ಇಬ್ಬರನ್ನೂ ಕಳುಹಿಸಿದ್ದಾರೆ. ಇಷ್ಟಕ್ಕೇ ಸುಮನಾಗದ ರೌಡಿ ತನ್ನ ಸಹಚರನೊಂದಿಗೆ ಇಂದು
ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಬಂದು ದಯಾನಂದನಗರದ ಸ್ಲಂ ಬಳಿಯ ಮೋರಿ ಬಳಿ ಇಸಾಕ್ ಜತೆ ಮತ್ತೆ ಜಗಳವಾಡಿ ಮಚ್ಚಿನಿಂದ ತಲೆಗೆ ಹಲ್ಲೆ ನಡೆಸಿ, ಡ್ರ್ಯಾಗರ್‌ನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಕೊಲೆಯಾಗಿರುವ ಇಸಾಕ್‌ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದ್ದು, ಈ ವಿಚಾರಕ್ಕೆ ಕೊಲೆ ನಡೆದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ಸುದ್ದಿ ತಿಳಿದು ಸಿದ್ದಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಕೆಂಪೇಗೌಡ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತನ ಸಹೋದರಿ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಸಿದ್ದಾಪುರ ಠಾಣೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

RELATED ARTICLES

Latest News