Wednesday, July 16, 2025
Homeರಾಜ್ಯರೌಡಿ ಕೊಲೆ ಕೇಸ್ : ಹೈಕೋರ್ಟ್‌ ಮೊರೆಹೋದ ಶಾಸಕ ಭೈರತಿ ಬಸವರಾಜ್‌

ರೌಡಿ ಕೊಲೆ ಕೇಸ್ : ಹೈಕೋರ್ಟ್‌ ಮೊರೆಹೋದ ಶಾಸಕ ಭೈರತಿ ಬಸವರಾಜ್‌

Rowdy murder case: MLA Bhairati Basavaraj moves High Court

ಬೆಂಗಳೂರು,ಜು.16– ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿ ಬಂಧನದ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್‌ ತಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಭಾರತಿನಗರ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನ್ನು ರದ್ದುಪಡಿಸಬೇಕೆಂದು ಕೋರಿ ಭೈರತಿ ಬಸವರಾಜ್‌ ಪರ ವಕೀಲರು ನ್ಯಾಯಮೂರ್ತಿ ಕೃಷ್ಣಕುಮಾರ್‌ ಅವರಿದ್ದ ಪೀಠಕ್ಕೆ ಮೇಲನವಿ ಅರ್ಜಿ ಸಲ್ಲಿಸಿದ್ದಾರೆ.

ಮಧ್ಯಾಹ್ನದ ನಂತರ ಅರ್ಜಿ ವಿಚಾರಣೆ ನಡೆಯಲಿದ್ದು, ಒಂದು ವೇಳೆ ಹೈಕೋರ್ಟ್‌ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿದರೆ ಇಲ್ಲವೇ ಪೊಲೀಸರು ಬಲವಂತದ ಕ್ರಮ ತೆಗೆದುಕೊಳ್ಳಬಾರದೆಂದು ಆದೇಶ ನೀಡಿದರೆ ಕಾನೂನಿನ ಸಂಕಷ್ಟದಿಂದ ಪಾರಾಗಲಿದ್ದಾರೆ. ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದರೆ ಭೈರತಿ ಬಸವರಾಜ್‌ಗೆ ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆ. ಪ್ರಕರಣ ಗಂಭೀರವಾಗಿರುವುದರಿಂದ ಅವರನ್ನು ವಿಚಾರಣೆಗೆ ಪೊಲೀಸರು ಒಳಪಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಜಮೀನು ವಿವಾದ ಹಿನ್ನಲೆಯಲ್ಲಿ ರೌಡಿಶೀಟರ್‌ ಹಿನ್ನಲೆಯಲ್ಲಿ ಶಿವಕುಮಾರ್‌ ಅಲಿಯಾಸ್‌‍ ಬಿಕ್ಲು ಶಿವುನನ್ನು ಚಾಕುವಿನಿಂದ ಇರಿದು ಬರ್ಭರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಶಿವಕುಮಾರ್‌ ತಾಯಿ ನೀಡಿದ ದೂರಿನ ಮೇರೆಗೆ ಭಾರತಿನಗರ ಠಾಣೆ ಪೊಲೀಸರು ಐವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆಯನ್ನು ಮುಂದುವರೆಸಿದ್ದಾರೆ. ಈ ಪ್ರಕರಣವು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ದುರುದ್ದೇಶ ಪೂರಕವಾಗಿ ರಾಜಕೀಯ ಸೇಡಿನಿಂದ ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಭೈರತಿ ವಾದವಾಗಿದೆ.

ಹೀಗಾಗಿಯೇ ಬಿಜೆಪಿ ಕಚೇರಿಗೆ ಆಗಮಿಸಿದ ಅವರು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾಗಿ ಪ್ರಕರಣ ಸಂಬಂಧ ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿ ತಮ ಪಾತ್ರದ ಬಗ್ಗೆ ನಿರಾಕರಿಸಿದ್ದಾರೆ. ಕೊಲೆಯಾಗಿರುವ ಆರೋಪಿಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ರಾಜಕೀಯ ತೇಜೋವಧೆ ಮಾಡಲು ಸೇರಿಸಲಾಗಿದೆ. ಕಾನೂನು ಹೋರಾಟ ನಡೆಸುತ್ತೇನೆ ಎಂದು ಭೈರತಿ ಬಸವರಾಜ್‌ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Latest News