ಆನೇಕಲ್. ಮಾ. 31- ಸ್ನೇಹಿತರ ಜೊತೆ ಪಾರ್ಟಿಮಾಡಲು ತೆರಳಿದ್ದ ರೌಡಿ ನೇಪಾಳಿ ಮಂಜನ ಮೇಲೆ ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿ ಮಾರಕಾಸಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೆಬ್ಬಗೋಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಮಂಜ ಅಲಿಯಾಸ್ ನೇಪಾಳಿ ಮಂಜ ಕೊಲೆಯಾದ ಹೆಬ್ಬಗೋಡಿ ಪೋಲಿಸ್ ಠಾಣೆಯ ರೌಡಿ ಶೀಟರ್.
ಗೊಲ್ಲಹಳ್ಳಿ ಮುಖ್ಯ ರಸ್ತೆಯ ಸಮೀಪದಲ್ಲಿನ ನಿರ್ಜನ ಪ್ರದೇಶದಲ್ಲಿ ಮಂಜ ರಾತ್ರಿ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡುತ್ತಿದ್ದನು. ಆ ಸಂದರ್ಭದಲ್ಲಿ ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ನೇಪಾಳಿ ಮಂಜನ ಮೇಲೆ ದಾಳಿ ಮಾಡಿ ಲಾಂಗು, ಮಚ್ಚುಗಳಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ ಕೊಚ್ಚಿ ಕೊಲೆಗೈದು ಬೈಕ್‌ಗಳಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.
ಸುದ್ದಿ ತಿಳಿದು ಹೆಬ್ಬಗೋಡಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ನೇಪಾಳಿ ಮಂಜನ ಮೇಲೆ ಕೊಲೆ, ಕೊಲೆ ಯತ್ನ, ರಾಬರಿ ಸೇರಿದಂತೆ ಹದಿನೈದಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈತನ ಮೇಲೆ ಎರಡು ಬಾರಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರೂ ಬುದ್ದಿ ಕಲಿತಿರಲಿಲ್ಲ.
ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಆನೇಕಲ್ ಭಾಗದಲ್ಲಿ ನೇಪಾಳಿ ಮಂಜ ಹವಾ ಸೃಷ್ಟಿಮಾಡಿದ್ದ. ಕಳೆದ ತಿಂಗಳು ರೌಡಿ ಪರೇಡ್‌ನಲ್ಲಿ ಪೊಲೀಸರು ನೇಪಾಳಿ ಮಂಜನಿಗೆ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದರು.
ರೌಡಿಸಂ ಸಹವಾಸ ಬೇಡವೆಂದು ಇತ್ತೀಚೆಗೆೆ ಕುಟುಂಬ ಸಮೇತ ಮಂಜ ಕುಣಿಗಲ್‌ನಲ್ಲಿ ವಾಸವಾಗಿದ್ದ. ಹಬ್ಬದ ನಿಮಿತ್ತ ನಿನ್ನೆ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಬಂದಿದ್ದ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಸಿ.ಕೆ. ಬಾಬಾ ಅವರು ಭೇಟಿ ನೀಡಿ ಪರಿಶೀಲಿಸಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಗೋಡಿ ಠಾಣೆ ಪೊಲೀಸರು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.