ಬೆಂಗಳೂರು,ಅ.28- ಗೋವಾದಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ತರುತ್ತಿದ್ದ ರೂ.1 ಕೋಟಿ ನಗದನ್ನು ಉತ್ತರಕನ್ನಡ ಜಿಲ್ಲೆಯ ಚಿತ್ತಾಕುಲ ಠಾಣೆ ಪೊಲೀಸರು ಜಪ್ತಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜಸ್ಥಾನ ಮೂಲದ ಕಲ್ಪೇಶ್ ಮತ್ತು ಬಮರರಾವ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದು, ಗೋವಾದಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ 1 ಕೋಟಿ ಹಣವಿಟ್ಟುಕೊಂಡು ರಾತ್ರಿ ಪ್ರಯಾಣಿಸುತ್ತಿದ್ದರು. ಖಾಸಗಿ ಬಸ್‌ನಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರವಾರ-ಗೋವಾ ಗಡಿಯ ಮಾಜಾಳಿ ಚೆಕ್‌ಪೋಸ್ಟ್ ಬಳಿ ಈ ಬಸ್ ಬರುವುದನ್ನೇ ಕಾಯುತ್ತಿದ್ದರು.
ರಾತ್ರಿ 9 ಗಂಟೆ ಸುಮಾರಿಗೆ ಚೆಕ್‌ಪೋಸ್ಟ್ ಬಳಿ ಈ ಬಸ್ ಬರುತ್ತಿದ್ದಂತೆ ಪೊಲೀಸರು ತಡೆದು ನಿಲ್ಲಿಸಿ ಬಸ್ ಪರಿಶೀಲಿಸಿದಾಗ ಸೀಟ್‌ವೊಂದರಲ್ಲಿ ಅಕ್ಕಪಕ್ಕ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಇಟ್ಟುಕೊಂಡಿದ್ದ 2 ಲೆದರ್ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಅದರಲ್ಲಿ ನಗದು ಪತ್ತೆಯಾಗಿವೆ. ಈ ಬಗ್ಗೆ ವಿಚಾರಿಸಿದಾಗ ಗೋವಾದಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾರೆ. ಆದರೆ ಆ ಹಣಕ್ಕೆ ಯಾವುದೇ ದಾಖಲೆಗಳಿರಲಿಲ್ಲ.
ಎರಡು ಲೆದರ್ ಬ್ಯಾಗ್‌ಗಳಲ್ಲಿ 500 ರೂ ಮುಖಬೆಲೆಯ 1 ಕೋಟಿ ಹಣದ ಬಗ್ಗೆ ವಿಚಾರಿಸಿದಾಗ ಆ ಇಬ್ಬರು ಪ್ರಯಾಣಿಕರು ಯಾವುದೇ ದಾಖಲೆ ಕೊಟ್ಟಿಲ್ಲ.ಹಣದ ಬ್ಯಾಗ್ ಸಮೇತ ಆ ಇಬ್ಬರನ್ನು ವಶಕ್ಕೆ ಪಡೆದು ಚಿತ್ತಾಕುಲ ಪೊಲೀಸ್ ಠಾಣೆಗೆ ಕರೆದೊಯ್ದು ಎನ್‌ಸಿಆರ್‌ದಾಖಲಿಸಿಕೊಂಡು ಹಣದ ಮೂಲದ ಬಗ್ಗೆ ವಿಚಾರಿಸಿದಾಗ ವ್ಯವಹಾರಕ್ಕಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದುದ್ದಾಗಿ ಹೇಳಿದ್ದಾರೆ.
ಈ ಹಣ ನೀಡಿದವರಿಗೆ ನೋಟೀಸ್ ಕೊಟ್ಟು ಸೂಕ್ತ ದಾಖಲೆ ಕೊಡುವಂತೆ ಸೂಚಿಸಿದ್ದಾರೆ. ಒಂದು ವೇಳೆ ದಾಖಲೆ ನೀಡಿದರೆ ಹಣ ಹಿಂದಿರುಗಿಸಲಿದ್ದಾರೆ. ಇಲ್ಲದಿದ್ದರೆ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ. ಈ ಹಣ ತೆರಿಗೆ ವಂಚಿಸಲು ಅಥವಾ ಹವಾಲಾ ಹಣವೋ ಎಂಬುವುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
