ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ವಿಜಯೋತ್ಸವ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ದುರಂತ ಸಂಭವಿಸಿದ್ದು, ಕಾಲ್ತುಳಿತಕ್ಕೆ ಒಳಗಾಗಿ 11ಜನರು ಮೃತಪಟ್ಟಿದ್ದಾರೆ. 47 ಮಂದಿ ಗಾಯಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾವಿಗೀಡಾದವರಲ್ಲಿ ಹೆಚ್ಚಿನವರು ಯುವ ವಯಸ್ಸಿನವರು. ನಾವು ಮೃತಪಟ್ಟವರ ಕುಟುಂಬದವರ ವಾರೀಸುದಾರರಿಗೆ 10 ಲಕ್ಷ ರೂ. ಪರಿಹಾರವಾಗಿ ನೀಡಲಿದ್ದೇವೆ. ಗಾಯಗೊಂಡವರಿಗೆ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ. ಗಾಯಗೊಂಡವರು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.
ಈ ದುರಂತದ ಬಗ್ಗೆ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿದ್ದೇವೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. 15 ದಿನಗಳ ಒಳಗಾಗಿ ತನಿಖೆಯ ವರದಿಯನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ. ನಿನ್ನೆ ತಡರಾತ್ರಿವರೆಗೂ ಐಪಿಎಲ್ ಫೈನಲ್ ಪಂದ್ಯ ನಡೆದಿತ್ತು. ಕ್ರಿಕೆಟ್ ಅಸೋಸಿಯೇಶನ್ ಅವರು ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸರ್ಕಾರದ ವತಿಯಿಂದಲೂ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಅವರು ಹೇಳಿದರು.
ನಾನು ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಸಂಭ್ರಮಾಚರಣೆ ಮಾಡುವಾಗ ಇಂತಹ ದುರಂತ ನಡೆಯಬಾರದಾಗಿತ್ತು. ಸರ್ಕಾರ ಇದಕ್ಕಾಗಿ ಬಹಳ ದುಃಖ ವ್ಯಕ್ತಪಡಿಸುತ್ತದೆ ಎಂದರು. ನಮ್ಮ ನಿರೀಕ್ಷೆಗೂ ಮೀರಿ ಜನ, ಅಭಿಮಾನಿಗಳು ಸೇರಿದ್ದರು. ವಿಧಾನಸೌಧ ಎದುರು ಸುಮಾರು 1ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು.
ವಿಧಾನಸೌಧ ಎದುರು ನಡೆದ ಸಮಾರಂಭದಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು, ದುರಂತ ನಡೆದಿಲ್ಲ. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದುರಂತ ಸಂಭವಿಸಿದೆ. ಯಾರೂ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕ್ರಿಕೆಟ್ ಅಸೋಸಿಯೇಶನ್ ಅಥವಾ ನಾವು ನಿರೀಕ್ಷಿಸಿರಲಿಲ್ಲ. ಕ್ರಿಕೆಟ್ ಸ್ಟೇಡಿಯಂನಲ್ಲಿ 35ಸಾವಿರ ಜನರು ಕುಳಿತುಕೊಳ್ಳುವ ಆಸನ ವ್ಯವಸ್ಥೆಯಿದೆ. ಆದರೆ 2-3 ಲಕ್ಷ ಜನರು ಆಗಮಿಸಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಜನರು ಬರುವ ನಿರೀಕ್ಷೆ ಮಾಡಿರಲಿಲ್ಲ. ಸ್ಟೇಡಿಯಂ ಸಾಮರ್ಥ್ಯದಷ್ಟು ಜನರ ನಿರೀಕ್ಷೆಯಿತ್ತು ಎಂದು ಅವರು ಹೇಳಿದರು.
ಗಾಯಗೊಂಡವರಿಗೆ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲಾ ನೆರವು ಸರ್ಕಾರ ಒದಗಿಸಲಿದೆ. ಈ ವಿಷಯದಲ್ಲಿ ರಾಜಕೀಯ ನಡೆಸುವುದು ಸರಿಯಲ್ಲ. ಈ ದುರಂತ ನಡೆಯಬಾರದಿತ್ತು. ನಡೆದು ಹೋಗಿದೆ. ಇದಕ್ಕಾಗಿ ಸರ್ಕಾರ ಅತ್ಯಂತ ಹೆಚ್ಚಿನ ದುಃಖ ವ್ಯಕ್ತಪಡಿಸುತ್ತದೆ. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ; ಅವರ ಕುಟುಂಬ ವರ್ಗ, ವಾರೀಸುದಾರರಿಗೆ, ಪೋಷಕರಿಗೆ ಸಾವಿನ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಅವರು ತಿಳಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-07-2025)
- ಬೆಂಬಲ ಬೆಲೆಯೊಂದಿಗೆ ಮಾವು ಖರೀದಿ ಮಿತಿ 200 ಕ್ವಿಂಟಾಲ್ಗೆ ವಿಸ್ತರಣೆ
- ಧರ್ಮಸ್ಥಳದಲ್ಲಿ ಅಸಹಜ ಸಾವು ಪ್ರಕರಣದ ತನಿಖೆಗೆ 20 ಅಧಿಕಾರಿಗಳ ಎಸ್ಐಟಿ ರಚನೆ
- ಸೆ. 22ರಿಂದ 15 ದಿನ ರಾಜ್ಯದಲ್ಲಿ ಮತ್ತೆ ಜಾತಿ ಸಮೀಕ್ಷೆ
- ಬಿಕ್ಲು ಶಿವ ಕೊಲೆ ಪ್ರಕರಣ : 2ನೇ ಬಾರಿಗೆ ವಿಚಾರಣೆಗೆ ಹಾಜರಾದ ಭೈರತಿ ಬಸವರಾಜ್