ಬೆಂಗಳೂರು, ಸೆ.12– ಕಂಡ ಕಂಡಲ್ಲಿ ಕಸ ಎಸೆಯುವವರಿಗೆ ಭಾರಿ ಪ್ರಮಾಣದ ದಂಡ ವಿಧಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತೀರ್ಮಾನಿಸಿದೆ. ಮನೆ ಮುಂದೆ ಕಸದ ವಾಹನ ಬಂದರೂ ಕಸ ಹಾಕದೆ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಬಿಸಿ ಮುಟ್ಟಿಸಬೇಕು ಎಂಬ ಉದ್ದೇಶದಿಂದ ಇಂತಹ ಕಠಿಣ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಜಿಬಿಎ ವ್ಯಾಪ್ತಿಯಲ್ಲಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಕರೀಗೌಡ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುವುದು ಮತ್ತೆ ಅವರು ಇಂತಹದ್ದೇ ಧೋರಣೆ ಮುಂದುವರೆಸಿದರೆ 2000 ರೂ.ಗಳ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಕಂಡ ಕಂಡಲ್ಲಿ ಕಸ ಎಸೆಯುವವರ ಮೇಲೆ ನಿಗಾ ಇಡಲು ಈಗಾಗಲೇ ಮಾರ್ಷಲ್ಗಳನ್ನು ನೇಮಿಸಲಾಗಿದೆ. ಹೀಗಾಗಿ ಮಾರ್ಷಲ್ಗಳ ಮೂಲಕವೇ ಕಸ ಎಸೆಯುವವರಿಗೆ ದಂಡ ವಿಧಿಸುವ ಅಧಿಕಾರ ನೀಡಲು ನಿರ್ಧರಿಸಲಾಗಿದೆ ಎಂದು ಕರೀಗೌಡರು ಮಾಹಿತಿ ನೀಡಿದರು.
ಅದೇ ರೀತಿ ನಗರದಲ್ಲಿ ಹೆಚ್ಚಾಗ್ತಿರೋ ಪ್ಲಾಸ್ಟಿಕ್ ಹಾವಳಿ ಸಮರ್ಪಕ ಕಸ ನಿರ್ವಹಣೆಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಕ ಬಳಕೆ ಪ್ಲಾಸ್ಟಿಕ್ಗೆ ಸಂಪೂರ್ಣ ಕಡಿವಾಣ ಹಾಕುವ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ನಗರದಲ್ಲಿ ಪ್ಲಾಸ್ಟಿಕ್ಬಳಕೆ ತಡೆಗೆ 27 ತಂಡಗಳ ರಚನೆ ಮಾಡಲಾಗುವುದು ಈ ತಂಡಗಳು ವಾರಕ್ಕೆ ಐದು ವಾರ್ಡ್ ಗಳಲ್ಲಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಕಳೆದ 10 ದಿನದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡ್ತಿದವರಿಂದ ಇದುವರೆಗೂ 49.14 ಲಕ್ಷದಂಡ ವಸೂಲಿ ಮಾಡಲಾಗಿದೆ ಎಂದು ಅವರು ವಿವರಿಸಿದರು. 281 ಸಗಟು ವ್ಯಾಪಾರಿಗಳು, 2842 ಚಿಲ್ಲರೆ ವ್ಯಾಪಾರಿಗಳಿಂದ ಈ ದಂಡ ವಸೂಲಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಸ ವಿಲೇವಾರಿ ಸಮಸ್ಯೆ ಸದ್ಯಕ್ಕಿಲ್ಲ; ನಗರದ ಕಸ ವಿಲೇವಾರಿ ಸಮಸ್ಯೆ ಸದ್ಯಕ್ಕಿಲ್ಲ. ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಕಸವನ್ನು ಕಣ್ಣೂರಿನಲ್ಲಿ ವಿಲೇವಾರಿ ಮಾಡಲಾಗ್ತಿದೆ. ಇನ್ನೆರಡು ವರ್ಷ ಅಲ್ಲೇ ವಿಲೇವಾರಿ ಮಾಡಲಾಗುವುದು ಅಲ್ಲಿಯವರೆಗೆ ಯಾವುದೇ ಸಮಸ್ಯೆ ಇಲ್ಲ. ಇದರ ಜೊತೆಗೆ ಬೆಂಗಳೂರು ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಕಸ ವಿಲೇವಾರಿಗೆ ಹೊಸ ಜಾಗಗಳನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.