ಬೆಂಗಳೂರು, ಫೆ.16-ರಾಜ್ಯದಲ್ಲಿ ವಾಣಿಜ್ಯ ತೆರಿಗೆಗಳ ಸಂಗ್ರಹ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಇದುವರೆಗೆ 84624.05 ಕೋಟಿ ರೂ. ಸಂಗ್ರಹವಾಗಿದೆ. ಡಿಸೆಂಬರ್ ತಿಂಗಳಿಗಿಂತ ಜನವರಿಯಲ್ಲಿ ಹೆಚ್ಚು ಸಂಗ್ರಹವಾಗಿದೆ.
ವಾಣಿಜ್ಯ ತೆರಿಗೆಗಳ ಇಲಾಖೆಯ ಮಾಹಿತಿ ಪ್ರಕಾರ ಡಿಸೆಂಬರ್ ತಿಂಗಳಲ್ಲಿ 8185.69 ಕೋಟಿ ರೂ. ತೆರಿಗೆಯ ಸಂಗ್ರಹವಾಗಿತ್ತು. ಜನವರಿ ತಿಂಗಳಲ್ಲಿ 8865.81 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಇದು ಡಿಸೆಂಬರ್‌ಗಿಂತ 680.12 ಕೋಟಿ ರೂ. ನಷ್ಟು ಹೆಚ್ಚಳವಾಗಿದೆ.
ಕಳೆದ ಹತ್ತು ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ 64017.29 ಕೋಟಿ ರೂ., ಕರ್ನಾಟಕ ಮಾರಾಟ ತೆರಿಗೆ 19472.16 ಕೋಟಿ ರೂ. ಹಾಗೂ ವೃತ್ತಿ ತೆರಿಗೆ 1134.60 ಕೋಟಿ ರೂ. ಸಂಗ್ರಹವಾಗಿದೆ.
ಕಳೆದ ಆರ್ಥಿಕ ಸಾಲಿನಲ್ಲಿ ಈ ಮೂರು ತೆರಿಗೆಗಳು ಸೇರಿ ಒಟ್ಟು 94363.27 ಕೋಟಿ ರೂ. ಸಂಗ್ರಹವಾಗಿತ್ತು. ಇನ್ನು ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ತೆರಿಗೆ ಬರಲಿದ್ದು, ಈ ಬಾರಿ ಕಳೆದ ವರ್ಷಕ್ಕಿಂತಲೂ ಹೆಚ್ಚು ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ.
ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ 9ಸಾವಿರ ಕೋಟಿ ರೂ.ಗೂ ಹೆಚ್ಚು ತೆರಿಗೆ ಸಂಗ್ರಹವಾಗಿತ್ತು. ಜನವರಿ ತಿಂಗಳಲ್ಲಿ 6579.05 ಸರಕು ಮತ್ತು ಸೇವಾ ತೆರಿಗೆ, 2188.15 ಕರ್ನಾಟಕ ಮಾರಾಟ ತೆರಿಗೆ ಹಾಗೂ 98.61 ಕೋಟಿ ರೂ. ವೃತ್ತಿ ತೆರಿಗೆಯನ್ನು ಸಂಗ್ರಹಿಸಲಾಗಿದೆ.