ಮುಂಬೈ,ಮಾ.17- ಬಿಜೆಪಿ ಜೋರು ಸದ್ದು ಮಾಡುತ್ತಿದೆ. ಆದರೆ ಅದಕ್ಕೆ ಸಂವಿಧಾನವನ್ನು ಬದಲಿಸುವಷ್ಟು ಧೈರ್ಯ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.ಮುಂಬೈನಲ್ಲಿ ಭಾರತ್ ಜೋಡೋ ನ್ಯಾಯ್ ಸಂಕಲ್ಪ ಪಾದಯಾತ್ರೆಯ ವೇಳೆ ಮಾತನಾಡಿದ ಅವರು, ಕರ್ನಾಟಕದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಬಿಜೆಪಿಗೆ 2/3 ರಷ್ಟು ಬಹುಮತ ಉಭಯ ಸದನ ಸಂಸತ್‍ನಲ್ಲೂ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಅನಂತ ಕುಮಾರ್ ಹೆಗಡೆ ಹೇಳಿದರು.ಬಿಜೆಪಿ ಇದನ್ನು ಸಂಸದರ ವೈಯಕ್ತಿಕ ಹೇಳಿಕೆ ಎಂದು ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಬಿಜೆಪಿ ಅನಗತ್ಯ ವಿಚಾರಗಳ ಮೂಲಕ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಮೂಲ ಸಮಸ್ಯೆಗಳನ್ನು ಮರೆ ಮಾಚುತ್ತಿದೆ ಎಂದರು.
ಬಿಜೆಪಿಗೆ ಸಂವಿಧಾನ ಬದಲಾವಣೆ ಮಾಡುವಷ್ಟು ಧೈರ್ಯವಿಲ್ಲ. ಸತ್ಯ ಮತ್ತು ಜನರ ಬೆಂಬಲ ನಮಗಿದೆ ಎಂದು ರಾಹುಲ್‍ಗಾಂಧಿ ತಿಳಿಸಿದರು.ಸರ್ಕಾರಗಳು ಏಕವ್ಯಕ್ತಿ ಕೇಂದ್ರಿತವಾಗಿ ನಡೆಯಬಾರದು. ಪ್ರಜಾಪ್ರಭುತ್ವದಲ್ಲಿ ಅಧಿಕಾರ ವಿಕೇಂದ್ರಿಕರಣಕ್ಕೆ ಅವಕಾಶವಿರಬೇಕು. ಒಂದೇ ಆಲೋಚನೆ, ಎಲ್ಲಾ ಪ್ರಕ್ರಿಯೆಗಳ ಬಗ್ಗೆಯೂ ಒಬ್ಬರಿಗೇ ಮಾಹಿತಿ ಇರುವುದು ಒಳ್ಳೆಯದಲ್ಲ. ಜನರ ದನಿಗೆ ಮನ್ನಣೆ ಸಿಗಬೇಕಾದರೆ ಅಧಿಕಾರ ವಿಕೇಂದ್ರಿಕರಣವಾಗಬೇಕು ಎಂದು ಹೇಳಿದರು.
ಒಬ್ಬ ವ್ಯಕ್ತಿ ಐಐಟಿಯಿಂದ ಪದವಿ ಪಡೆದಿದ್ದಾನೆಂದಾದರೆ ಅದರ ಅರ್ಥ ಒಬ್ಬ ರೈತನ ಕೃಷಿ ಜ್ಞಾನಕ್ಕಿಂತಲೂ ಹೆಚ್ಚಿನ ತಿಳಿವಳಿಕೆ ಇದೆಯೆಂದರ್ಥವಲ್ಲ. ಬಿಜೆಪಿ ನ್ಯಾಯಯುತವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿಲ್ಲ. ಪ್ರಧಾನಿ ನರೇಂದ್ರಮೋದಿ ಮತ್ತು ಆರ್‍ಎಸ್‍ಎಸ್ ಸುಳ್ಳಿನ ಜ್ಞಾನಗಳ ದೃಷ್ಟಿಕೋನಗಳಾಗಿವೆ. ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕರಿಗೆ ಯಾವುದೇ ಜ್ಞಾನ ಇಲ್ಲವೆಂಬಂತೆ ಬಳಸಲಾಗುತ್ತಿದೆ ಎಂದರು.
ರಾಹುಲ್‍ಗಾಂಧಿ ತಮ್ಮ 63 ದಿನಗಳ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಮುಂಬೈನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್‍ರವರ ಚೈತನ್ಯ ಭೂಮಿಯಲ್ಲಿ ನಮನ ಸಲ್ಲಿಸುವ ಮೂಲಕ ಅಂತ್ಯಗೊಳಿಸಿದರು.