Friday, November 22, 2024
Homeರಾಜಕೀಯ | Politicsಬಿಜೆಪಿಯೊಳಗಿನ ಅಸಮಾಧಾನ ಸರಿದೂಗಿಸಲು ಆರ್‌ಎಸ್‌‍ಎಸ್‌‍ ಮಧ್ಯಪ್ರವೇಶ, ನಾಳೆ ಮಹತ್ವದ ಸಭೆ

ಬಿಜೆಪಿಯೊಳಗಿನ ಅಸಮಾಧಾನ ಸರಿದೂಗಿಸಲು ಆರ್‌ಎಸ್‌‍ಎಸ್‌‍ ಮಧ್ಯಪ್ರವೇಶ, ನಾಳೆ ಮಹತ್ವದ ಸಭೆ

RSS intervention to offset discontent within BJP

ಬೆಂಗಳೂರು, ಸೆ.11- ಮನೆಯೊಂದು ಮೂರು ಬಾಗಿಲು ಎಂಬಂತಾಗಿರುವ ಬಿಜೆಪಿಯಲ್ಲಿ ಉಂಟಾಗಿರುವ ಅಸಮಾಧಾನವನ್ನು ಸರಿದೂಗಿಸಲು ಆರ್‌ಎಸ್‌‍ಎಸ್‌‍ ಮಧ್ಯಪ್ರವೇಶ ಮಾಡಿದ್ದು, ನಾಳೆ ಮಹತ್ವದ ಸಭೆ ನಡೆಸಲಿದೆ.ಸಭೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಬಿಜೆಪಿಯ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌, ರಾಜ್ಯ ಬಿಜೆಪಿ ಉಸ್ತುವಾರಿ ರಾಧಮೋಹನ್‌ದಾಸ್‌‍ ಅಗರವಾಲ್‌, ಮಾಜಿ ಸಚಿವರಾದ ರಮೇಶ್‌ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿದಂತೆ ಒಟ್ಟು 40 ಪ್ರಮುಖ ನಾಯಕರನ್ನು ಆಹ್ವಾನಿಸಲಾಗಿದೆ.

ಮಾಗಡಿ ರಸ್ತೆ ಚೆನ್ನೇನಹಳ್ಳಿಯಲ್ಲಿರುವ ಆರ್‌ಎಸ್‌‍ಎಸ್‌‍ನ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಇತ್ತೀಚೆಗೆ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ, ಪಕ್ಷ ಸಂಘಟನೆ, ಸರ್ಕಾರದ ವಿರುದ್ಧ ಹೋರಾಟ, ಸದಸ್ಯತ್ವ ನೋಂದಣಿ, ಹಲವು ಮಹತ್ವದ ವಿಷಯಗಳು ಚರ್ಚೆಗೆ ಒಳಪಡಲಿವೆ.
ಸಾಮಾನ್ಯವಾಗಿ ಬಿಜೆಪಿಯ ಆಂತರಿಕ ವಿಷಯದಲ್ಲಿ ಮೂಗು ತೂರಿಸಲು ಹಿಂದೇಟು ಹಾಕುವ ಆರ್‌ಎಸ್‌‍ಎಸ್‌‍ ನಾಯಕರು ಕೇಂದ್ರ ಸಚಿವರ ಮನವಿ ಮೇರೆಗೆ ಬೈಟಕ್‌ ನಡೆಸಲು ಮುಂದಾಗಿದ್ದಾರೆಂದು ಮೂಲಗಳು ತಿಳಿಸಿವೆ.

ಬಿಜೆಪಿ ನಾಯಕರು ಬಯಸಿದರೆ ಮಾತ್ರ ಎಲ್ಲರನ್ನೂ ಒಟ್ಟುಗೂಡಿಸಿ ಅಸಮಾಧಾನಕ್ಕೆ ಆಸ್ಪದವಿಲ್ಲದಂತೆ ಪಕ್ಷ ಮುನ್ನಡೆಸಿಕೊಂಡು ಹೋಗಬೇಕೆಂದು ಆರ್‌ಎಸ್‌‍ಎಸ್‌‍ ನಾಯಕರು ಸೂಕ್ತ ಸಲಹೆ, ಮಾರ್ಗದರ್ಶನ ಮಾಡುತ್ತಾರೆ. ಅದನ್ನು ಹೊರತುಪಡಿಸಿದರೆ ಬಿಜೆಪಿಯ ಕೆಲವು ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಇಲ್ಲವೇ ಮಧ್ಯಪ್ರವೇಶ ಮಾಡುವ ಅಭ್ಯಾಸವನ್ನು ಸಂಘ ಪರಿವಾರದ ನಾಯಕರು ಇಟ್ಟುಕೊಂಡಿಲ್ಲ.

ಪ್ರಧಾನಿ ನರೇಂದ್ರಮೋದಿ ಅವರ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿರುವ ರಾಜ್ಯವನ್ನು ಪ್ರತಿನಿಧಿಸುವ ಸಂಸದರೊಬ್ಬರು ನೀವು ಹೇಳಿದರೆ ಎಲ್ಲವೂ ಸರಿಹೋಗುತ್ತದೆ. ಪಕ್ಷವು ಕಷ್ಟ ಕಾಲದಲ್ಲಿರುವಾಗ ನೀವು ಮಧ್ಯಪ್ರವೇಶ ಮಾಡಲೇಬೇಕೆಂದು ಕೆಲ ದಿನಗಳ ಹಿಂದೆ ಕೋರಿಕೊಂಡಿದ್ದರು. ಅವರ ಮನವಿ ಮೇರೆಗೆ ಸಭೆ ನಡೆಯಲಿದೆ.

ರಾಜ್ಯ ಬಿಜೆಪಿಯಲ್ಲಿ ಒಡಕು:
ವಿಧಾನಸಭೆ ಚುನಾವಣೆ ಸೋಲಿನ ಬಳಿಕ ರಾಜ್ಯ ಬಿಜೆಪಿಯಲ್ಲಿ ನಾಯಕರ ನಡುವೆ ಬಿರುಕು ಮೂಡಿತು. ನಂತರ, ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ಬಳಿಕ ಕೆಲ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಮುಲಾಮು ಹಚ್ಚಲಾಯ್ತು. ಆದರೂ, ಪೂರ್ಣ ಪ್ರಮಾಣದಲ್ಲಿ ಗಾಯ ವಾಸಿಯಾಗಲಿಲ್ಲ.

ನಂತರ, ಲೋಕಸಭೆ ಚುನಾವಣೆಗೆ ಟಿಕೆಟ್‌ ಕೈ ತಪ್ಪುತ್ತಿದ್ದಂತೆ ನಿರೀಕ್ಷೆಯಲ್ಲಿದ್ದ ಮಾಜಿ ಸಂಸದ ಪ್ರತಾಪ್‌ಸಿಂಹ ಸೇರಿದಂತೆ ಕೆಲ ನಾಯಕರು ಹತಾಶೆಯಿಂದ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದರು. ಆಗಲೂ ಕೂಡ ತೇಪೆ ಹಚ್ಚಲಾಯಿತಾದರೂ ಬಿರುಕು ಮತ್ತೆ ಮೂಡಿತ್ತು.

ಇತ್ತೀಚಿಗೆ ಬಿಜೆಪಿ ನಡೆಸಿದ ಮೈಸೂರು ಚಲೋ ಪಾದಯಾತ್ರೆಯಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ನಾವು ಬಳ್ಳಾರಿವರೆಗೆ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇವೆ. ಹೈಕಮಾಂಡ್‌ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ ಎಂದು ಘೋಷಿಸಿದ್ದರು. ಬಳಿಕ, ಬಸನಗೌಡ ಪಾಟೀಲ್‌ ಯತ್ನಾಳ್‌, ಮಾಜಿ ಸಂಸದ ಪ್ರತಾಪ್‌ ಸಿಂಹ, ಕುಮಾರ್‌ಬಂಗಾರಪ್ಪ ಸೇರಿದಂತೆ ಇನ್ನಿತರೆ ಕೆಲ ನಾಯಕರು ನಡೆಸಿದ ಸಭೆ ಚರ್ಚೆಗೆ ಕಾರಣವಾಯಿತು.

ಇತ್ತೀಚಿಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ಸಭಾ ಕಾರ್ಯಕ್ರಮವೊಂದರಲ್ಲಿ ಬಸವರಾಜ ಬೊಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದರು.
ಇದರ ನಡುವೆ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌ ದೆಹಲಿಗೆ ತೆರಳಿದ್ದು, ವರಿಷ್ಠರ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಏನು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುವುದನ್ನು ಕಾದು ನೋಡಬೇಕು.

RELATED ARTICLES

Latest News