ಬೆಂಗಳೂರು, ಅ.26- ರಾಜ್ಯದ 17 ಜಿಲ್ಲೆಗಳಲ್ಲಿ ಇಂದು ಆರ್ಎಸ್ಎಸ್ ಪಥಸಂಚಲನ ನಡೆಯಲಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ಅವರು ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ರಾಯಚೂರು, ಹಾಸನ, ಶಿವಮೊಗ್ಗ, ಮಂಡ್ಯ, ಬೆಳಗಾವಿ, ಕೋಲಾರ, ವಿಜಯಪುರ ಸೇರಿದಂತೆ 17 ಜಿಲ್ಲೆಗಳಲ್ಲಿ ಪಥ ಸಂಚಲನ ನಡೆಯಲಿದೆ ಎಂದು ವಿವರಿಸಿದರು.ಪಥ ಸಂಚಲನ ನಡೆಯುವ ಜಿಲ್ಲೆಗಳಲ್ಲಿ ಎಸ್ಪಿಗಳು ಮೊಕ್ಕಾಂ ಹೂಡಿದ್ದಾರೆ. ಸ್ಥಳೀಯ ಪೊಲೀಸರ ಜತೆಗೆ ಕೆಎಸ್ಆರ್ಪಿ, ಡಿಎಆರ್ ತುಕಡಿಗಳನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ.
ಸಣ್ಣಪುಟ್ಟ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಜಿಲ್ಲಾ ಎಸ್ಪಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪಥ ಸಂಚಲನ ನಡೆಯುವ ರಸ್ತೆಗಳಲ್ಲಿ ನಿಗಾ ವಹಿಸುವಂತೆಯೂ ಸಹ ಈಗಾಗಲೇ ತಿಳಿಸಲಾಗಿದೆ.
ಕೆಲವು ಜಿಲ್ಲೆಗಳಲ್ಲಿ ಶಾಂತಿಸಭೆ ಸಹ ನಡೆಸಲಾಗಿದೆ. ಒಟ್ಟಾರೆ ಪಥ ಸಂಚಲನ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದ ರೀತಿ ಸೂಕ್ತ ಬಂದೋಬಸ್ತ್ ಮಾಡಿದ್ದೇವೆ.
ಯಾರೇ ಆದರೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ಮಾಲೂರಿನಲ್ಲಿ ಆರ್ಎಸ್ಎಸ್ ಪಥಸಂಚಲ
ಬೆಂಗಳೂರು,ಅ.26-ಅತ್ತ ಚಿತ್ತಾಪುರ ಮತ್ತು ಯಾದಗಿರಿಯಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಜಿಲ್ಲಾಡಳಿತ ನಿರ್ಬಂಧ ಹಾಕಿರುವ ಬೆನ್ನಲ್ಲೇ ಇತ್ತ ಕೋಲಾರದ ಮಾಲೂರಿನಲ್ಲಿ ಆರ್ಎಸ್ಎಸ್ ಪಥಸಂಚಲನವು ಅದ್ಧೂರಿಯಾಗಿ ನಡೆಯಿತು.
ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಗರದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಬಿಗಿಭದ್ರತೆಯನ್ನು ಕೈಗೊಳ್ಳಲಾಗಿತ್ತು.
ಜಿಲ್ಲಾಡಳಿತವು ಪಥಸಂಚಲನಕ್ಕೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅನುಮತಿ ನೀಡಿತ್ತು. 3 ಗಂಟೆಗೆ ಜಮಾವಣೆಗೊಂಡ ಸ್ವಯಂಸೇವಕರು ಸುಮಾರು 4 ಕಿ.ಮೀವರೆಗೆ ಪಥಸಂಚಲನ ನಡೆಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಶತಮಾನೋತ್ಸವದ ಅಂಗವಾಗಿ ನಗರದಲ್ಲಿಂದು ಸಾವಿರಾರು ಗಣವೇಷಧಾರಿಗಳು ಪಥಸಂಚಲನ ನಡೆಸಿದರು. ನಗರದ ಹೊಂಡಾ ಸ್ಟೇಡಿಯಂನಿಂದ ಆರಂಭವಾದ ಪಥಸಂಚಲನವು ಬಿಇಒ ಕಚೇರಿಯ ಮುಖ್ಯರಸ್ತೆ ಮಾರ್ಗವಾಗಿ ಕುವೆಂಪು ವೃತ್ತ, ಧರ್ಮರಾಯಸ್ವಾಮಿ ದೇವಾಲಯ, ಅಗ್ರಹಾರ ಬೀದಿ, ಕುಂಬಾರಪೇಟೆ ವೃತ್ತ, ದೊಡ್ಡಪೇಟೆ, ಮಹಾರಾಜ ಸರ್ಕಲ್, ಬಾಬುರಾವ್ ರಸ್ತೆ, ಕೆಂಪೇಗೌಡ ಸರ್ಕಲ್, ಮಾರಿಕಾಂಬ ಸರ್ಕಲ್, ಬ್ರಹಕುಮಾರಿ ರಸ್ತೆ, ಅರಳೇರಿ ರಸ್ತೆ ಮೂಲಕ ಹಾದು ಪುನಃ ಹೊಂಡಾ ಸ್ಟೇಡಿಯಂನಲ್ಲಿ ಸಂಪನ್ನಗೊಂಡಿತು.
ಆರ್ಎಸ್ಎಸ್ ಪಥಸಂಚಲನದ ಹಿನ್ನೆಲೆಯಲ್ಲಿ ಇಡೀ ಮಾಲೂರು ಪಟ್ಟಣದ ಕಳೆದ ಎರಡು ದಿನಗಳಿಂದ ಕೆಸರಿಮಯವಾಗಿತ್ತು. ಪಥಸಂಚಲನ ಹಾದುಹೋಗುವ ಕಡೆಯಲೆಲ್ಲ ದಾರಿಯುದ್ದಕ್ಕೂ ಕೇಸರಿ ಬಾವುಟ, ಭಾಗಧ್ವಜಗಳು, ಫ್ಲೆಕ್ಸ್ , ಬಂಟಿಂಗ್ಸ್ ,ಆರ್ಎಸ್ಎಸ್ ನಾಯಕರ ಭಾವಚಿತ್ರಗಳು ರಾರಾಜಿಸುತ್ತಿದ್ದವು.
ನಗರದ ಅಂತರಗಂಗೆ ರಸ್ತೆಯ ಕುವೆಂಪು ಉದ್ಯಾನ ಮುಂಭಾಗ ಆರಂಭಗೊಂಡ ಪಥಸಂಚಲನದಲ್ಲಿ ಭಾರತಮಾತೆ ಹಾಗೂ ಸಂಘದ ಸಂಸ್ಥಾಪಕ ಡಾ.ಕೇಶವ್ ಬಲಿರಾಮ್ ಹೆಡಗೇವಾರ್ ಭಾವಚಿತ್ರವನ್ನು ತೆರದ ಜೀಪಿನಲ್ಲಿ ಮೆರವಣಿಗೆ ನಡೆಸಲಾಯಿತು. ಜೀಪಿನ ಹಿಂದೆ ಮುಂದೆ ಆರ್ಎಸ್ಎಸ್ ಗಣವೇಷಧಾರಿಗಳು ದಂಡ ಹಿಡಿದು, ಕೆಲವರು ಡ್ರಮ್ ಬಾರಿಸುತ್ತಾ ಸಾಗಿಸಿದರು.
ಸರ್ಕಾರ ವರ್ಸಸ್ ಆರ್ಎಸ್ಎಸ್ ಎಂದು ಬಿಂಬಿತವಾಗಿದ್ದ ಈ ಪಥಸಂಚಲನವು ರಾಜಕೀಯವಾಗಿ ಅಷ್ಟೇ ಮಹತ್ವವನ್ನು ಪಡೆದುಕೊಂಡಿತ್ತು. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಆರ್ಎಸ್ಎಸ್ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಆಗಮಿಸಿ ಶಾಂತಿ ರೀತಿಯಲ್ಲಿ ಪಥಸಂಚಲನ ನಡೆಸಿದರು.
ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ಮಂಜುನಾಥ ಗೌಡ ಸೇರಿದಂತೆ ಅನೇಕರು ಪಥಸಂಚಲನದಲ್ಲಿ ಗಣವೇಷಧಾರಿಗಳಾಗಿ ಎಲ್ಲರ ಗಮನಸೆಳೆದರು. ನಗರದ ಪ್ರಮುಖ ಭಾಗಗಳಲ್ಲಿ ಪಥಸಂಚಲನ ಹಾದುಬರುವಾಗ ಸಾರ್ವಜನಿಕರು ತುಂಬು ಹೃದಯದ ಸ್ವಾಗತ ಕೋರಿ ದೇಶಾಭಿಮಾನ ಮೆರೆದರು.ಅನೇಕರು ಗಣವೇಷಧಾರಿಗಳಿಗೆ ಪುಷ್ಪವೃಷ್ಟಿ ಮಾಡಿ ಭಾರತ್ ಮಾತಾ ಕೀ ಜೈ ಘೋಷಣೆಗಳನ್ನು ಮೊಳಗಿಸಿದರು.
