ಬೆಳಗಾವಿ,ಡಿ.12– ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಆಧುನಿಕ ಕರ್ನಾಟಕದ ಮಹಾನ್‌ಶಿಲ್ಪಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿಂದು ಬಣ್ಣಿಸಿದರು.
ಸಂತಾಪ ಸೂಚನಾ ನಿರ್ಣಯದ ವೇಳೆ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಅವರು ಕೇವಲ ಐಟಿ-ಬಿಟಿ ವಲಯಕ್ಕೆ ಉತ್ತೇಜನ ನೀಡಲಿಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿಗೂ ಆದ್ಯತೆ ನೀಡಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಅವರು ಸಹಕಾರ ನೀಡದ ಇಲಾಖೆ, ವರ್ಗ ಇಲ್ಲ ಎಂದು ಹೇಳಿದರು.
ಎಸ್.ಎಂ.ಕೃಷ್ಣ ಅವರು ತಂದೆ ಮಗನನ್ನು ಪೋಷಿಸುವಂತೆ ನನ್ನನ್ನು ಬೆಂಬಲಿಸಿದರು. ನನಗೂ ಅವರಿಗೂ ಒಂದೆರಡು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಈಗಲೂ ಆ ನಿರ್ಧಾರಗಳು ಸರಿಯಲ್ಲ ಎಂದು ಹೇಳುತ್ತೇನೆ. ಉಳಿದಂತೆ ನಮಿಬ್ಬರ ಸಂಬಂಧ ಅವಿನಾಭಾವದಿಂದಿತ್ತು ಎಂದರು.
ಎಸ್.ಎಂ.ಕೃಷ್ಣ ಅವರ ಸಾವು ನನಗೆ ದುಃಖ ತಂದಿಲ್ಲ. ಬದಲಾಗಿ ಸಂತೋಷ ತಂದಿದೆ. 92 ವರ್ಷ ತುಂಬಿದ ಜೀವನದಲ್ಲಿ ಮೂರ್ನಾಲ್ಕು ತಿಂಗಳಷ್ಟೇ ಅವರು ಅನಾರೋಗ್ಯದಲ್ಲಿದ್ದರು. ಉಳಿದಂತೆ ಅವರ ಉಡುಪು, ಜೀವನಶೈಲಿ ಎಲ್ಲವೂ ವರ್ಣನೀಯವಾಗಿತ್ತು ಎಂದು ಹೇಳಿದರು.
ನಾನು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು ಬಂಗಾರಪ್ಪ ಅವರ ಜೊತೆ. ನನ್ನ ಮತ್ತು ಕೃಷ್ಣ ಅವರ ಸಂಬಂಧ ಬೇರೆಯ ಸ್ವರೂಪದಲ್ಲಿತ್ತು. ಬಂಗಾರಪ್ಪ ಹೊಸ ಪಕ್ಷ ಕಟ್ಟಿದಾಗ ನನ್ನನ್ನು ಕರೆಯಲಿಲ್ಲ. ಕಾಂಗ್ರೆಸ್‌ನಲ್ಲೇ ಉಳಿದುಕೊಂಡಿದ್ದೆ. ಬಿಜೆಪಿಯವರು ಆಗ ನನ್ನನ್ನು ಕರೆಯಲಿಲ್ಲ ಎಂದು ಛೇಡಿಸಿದರು.
ಎಸ್.ಎಂ.ಕೃಷ್ಣ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುವಾಗ ನಾನು ಮತ್ತು ಟಿ.ಬಿ.ಜಯಚಂದ್ರ ದೆಹಲಿಗೆ ಹೋಗಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೆವು. ಅಲ್ಲಿ ಸದಸ್ಯರಾಗಿದ್ದ ಜಿ.ವೈ.ಕೃಷ್ಣನ್ ಅವರ ಬದಲಾಗಿ ಎಸ್.ಎಂ.ಕೃಷ್ಣ ಅವರಿಗೆ ರಾಜ್ಯಸಭಾ ಟಿಕೆಟ್ ನೀಡಬೇಕೆಂಬುದು ನಮ ಬೇಡಿಕೆಯಾಗಿತ್ತು. ಅದಕ್ಕೆ ಆರಂಭದಲ್ಲಿ ಪಿ.ವಿ.ನರಸಿಂಹರಾವ್ ಒಪ್ಪಲಿಲ್ಲ. ಅನಂತರ ಒಪ್ಪಿದರು ಎಂದರು.
ಎಸ್.ಎಂ.ಕೃಷ್ಣ ಅವರು ಪಕ್ಷದ ಅಧ್ಯಕ್ಷರಾಗಿ ಪಾಂಚಜನ್ಯ ಮೊಳಗಿಸಿ ಅಧಿಕಾರಕ್ಕೆ ಬಂದರು. ನಾನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾದಾಗ ಅವರು ಮಾರ್ಗದರ್ಶನ ಮಾಡಿದ್ದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಬಜೆಟ್ 26 ಸಾವಿರ ಕೋಟಿ ರೂ. ಇತ್ತು.
ಈಗ 3.50 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆಗ ಪಂಚಾಯಿತಿಗೆ ನೀಡಲಾಗುತ್ತಿದ್ದ ಅನುದಾನವನ್ನು 5 ಲಕ್ಷಕ್ಕೆ ಹೆಚ್ಚಿಸಿದರು. ರೈತರು ಕೂಡ ಶ್ರೀಗಂಧ ಬೆಳೆಯಲು ಅವಕಾಶ ಮಾಡಿಕೊಟ್ಟರು. ಅಬಕಾರಿ ಲಾಬಿಗೆ ಮಣಿಯದೆ ಪಾನೀಯ ನಿಗಮವನ್ನು ಸ್ಥಾಪಿಸಿದರು.
ಅವರೆಂದೂ ಸ್ವಾರ್ಥಕ್ಕೆ, ಸ್ನೇಹ ಸಂಬಂಧಕ್ಕೆ ಅಧಿಕಾರ ದುರ್ಬಳಕೆ ಮಾಡಿಕೊಂಡವರಲ್ಲ ಎಂಬುದಕ್ಕೆ ಇದೇ ಸಾಕ್ಷಿ. ವರನಟ ಡಾ.ರಾಜ್‌ಕುಮಾರ್ ಅಪಹರಣವಾದಾಗ ಮುಖ್ಯಮಂತ್ರಿಯಾಗಿದ್ದ ಕೃಷ್ಣ ಟೆನ್ಷನ್‌ನಲ್ಲಿದ್ದರು. ಆಗ ಪೊಲೀಸರಿಗೆ ಮುಕ್ತ ಅವಕಾಶ ಮಾಡಿಕೊಡದೆ ಸಂಧಾನದ ಮೂಲಕ ಪ್ರಯತ್ನ ಮಾಡಲಾಯಿತು ಎಂಬುದನ್ನು ಡಿ.ಕೆ.ಶಿವಕುಮಾರ್ ನೆನಪು ಮಾಡಿಕೊಂಡರು.
ದೆಹಲಿ ಮಾದರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ಯೋಜನೆ ಜಾರಿಗೆ ತರಲು ಕೂಡ ಅವರು ಕಾರಣಕರ್ತರಾಗಿದ್ದರು. ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇ ರೀತಿ ಬದುಕಿಗೆ ನಂಬಿಕೆ ಮುಖ್ಯ. ನಂಬಿಕೆ ಇಲ್ಲ ಎಂದ ಮೇಲೆ ಸಂಬಂಧ ಉಳಿಯುವುದಿಲ್ಲ. ಅವರ ನಮ ನಡುವೆ ಉತ್ತಮವಾದ ಸಂಬಂಧವಿತ್ತು. ರಾಜಕೀಯವಾಗಿ ನಾನು ಕೊಟ್ಟ ಸಲಹೆಯನ್ನು ಅವರು ಕೇಳುತ್ತಿದ್ದರು ಎಂದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು 5 ಕೋಟಿ ಸಸಿ ನೆಡುವ ಕಾರ್ಯಕ್ಕೆ ಮುಂದಾದಾಗ ಎಸ್.ಎಂ.ಕೃಷ್ಣ ಅವರು ಸಹಕಾರ ನೀಡಿದರು. ವಿದೇಶಗಳ ನಾಯಕರು ದೆಹಲಿಗೆ ಬಂದು ಅನಂತರ ಬೆಂಗಳೂರಿಗೆ ಬರುತ್ತಿದ್ದರು. ಕೃಷ್ಣ ಅವರ ಕಾಲದಲ್ಲಿ ನೇರವಾಗಿ ಬೆಂಗಳೂರಿಗೆ ಬಂದು ಆನಂತರ ದೆಹಲಿಗೆ ಬರುತ್ತಿದ್ದಾರೆ ಎಂದು ಆಗಿನ ಪ್ರಧಾನಿ ವಾಜಪೇಯಿ ಹೇಳಿದ್ದರು ಎಂದರು.
ಶಾಲೆ ಬಿಡುವ ಮಕ್ಕಳನ್ನು ಮರಳಿ ತರುವ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಾರಂಭಿಸಿದರು. ನಾನು ವಿರೋಧಪಕ್ಷದ ನಾಯಕ ಸ್ಥಾನ ಬೇಡ ಎಂದಾಗ ಬೈಯ್ದು ಬುದ್ಧಿಮಾತು ಹೇಳಿದರು. ಮರಣ ದುಃಖವಲ್ಲ, ಸಾಧನೆಗೆ ಸಾವಿಲ್ಲ, ಹುಟ್ಟು-ಸಾವಿನ ನಡುವೆ ಏನು ಸಾಧನೆ ಮಾಡಿದ್ದೇವೆ? ಎಂಬುದು ಮುಖ್ಯ. ವಿಕಾಸಸೌಧ, ಉದ್ಯೋಗಸೌಧ ಕಟ್ಟಿದರು.
ಅವರು ಆಡಳಿತಾವಧಿಯಲ್ಲಿ ಸಾಕ್ಷಿಗುಡ್ಡೆಗಳನ್ನು ಬಿಟ್ಟುಹೋಗಿದ್ದಾರೆ. ಅವರ ಆದರ್ಶ ನಮಗೆ ದಾರಿದೀಪ. ಕಾವೇರಿ ವಿಚಾರದಲ್ಲಿ ಪಾದಯಾತ್ರೆ ಮಾಡಿ ಆನಂತರದ ಬೆಳವಣಿಗೆಯಲ್ಲಿ ರಾಜೀನಾಮೆ ಕೊಡುವುದಾಗಿ ಹೇಳಿದರು. ಅದನ್ನು ತಡೆದು ಮುಖ್ಯಮಂತ್ರಿ ಸ್ಥಾನದಲ್ಲೇ ಇರಿಸುವ ಪ್ರಯತ್ನ ಮಾಡಿದೆ. ನನಗೆ ಕೋಟು ಹಾಕುವುದನ್ನು ಕಲಿಸಿದವರೇ ಎಸ್.ಎಂ.ಕೃಷ್ಣ. ಶಿಸ್ತುಬದ್ಧ ಜೀವನ, ಸಂಸ್ಕಾರ, ಸಂಸ್ಕೃತಿ ಎಲ್ಲವೂ ಅವರಲ್ಲಿತ್ತು ಎಂದು ಗುಣಗಾನ ಮಾಡಿದರು.