Friday, December 27, 2024
Homeರಾಜ್ಯರಾಜ್ಯಕ್ಕೆ ಎಸ್.ಎಂ.ಕೃಷ್ಣ ಅವರ ಮಹತ್ವದ ಕೊಡುಗೆಗಳು

ರಾಜ್ಯಕ್ಕೆ ಎಸ್.ಎಂ.ಕೃಷ್ಣ ಅವರ ಮಹತ್ವದ ಕೊಡುಗೆಗಳು

S.M. Krishna's significant contributions to the state

ಏಕಗವಾಕ್ಷಿ ಪದ್ಧತಿ :ಕೈಗಾರಿಕಾ ಪ್ರಗತಿಗೆ ಕೊಡುಗೆ
ಬೆಂಗಳೂರು,ಡಿ.10- ರೆಡ್ ಟೇಪಿಸಂ ಎಂಬ ಪಿಡುಗಿಗೆ ಕೊನೆಯಾಡಿ ಏಕಗವಾಕ್ಷಿ ಯೋಜನೆಗಳ ಮೂಲಕ ಕೈಗಾರಿಕಾಭಿವೃದ್ಧಿಗೆ ವೇಗ ನೀಡಿದವರಲ್ಲಿ ಎಸ್.ಎಂ.ಕೃಷ್ಣ ಮೊದಲಿಗರು.
ವಿದೇಶಗಳಲ್ಲಿ ಅಧ್ಯಯನ ನಡೆಸಿದ ಎಸ್.ಎಂ.ಕೃಷ್ಣಅವರಿಗೆ ಆಡಳಿತದಲ್ಲಿ ಅಪಾರ ಅನುಭವವಿತ್ತು. 90 ರ ದಶಕದಲ್ಲಿ ಫೈಲ್ ಇನ್ಸ್ ಪೆಕ್ಟರ್ಸ್ ಎಂಬ ನಿಧಾನಗತಿಯ ಹಾವಳಿಯಿಂದ ಉದ್ಯಮಿಗಳು, ವ್ಯಾಪಾರಸ್ಥರು, ಹೂಡಿಕೆದಾರರು ಜರ್ಜರಿತರಾಗಿದ್ದರು.

ಕರ್ನಾಟಕದಲ್ಲಿ ಭರ್ತಿಯಾದ ನೈಸರ್ಗಿಕ ಹಾಗೂ ಮಾನವ ಸಂಪನೂಲಗಳಿದ್ದವು. ಇದನ್ನು ಸದುಪಯೋಗಪಡಿಸಿಕೊಂಡು ಕೈಗಾರಿಕೋದ್ಯಮಕ್ಕೆ ವ್ಯಾಪಕ ಅವಕಾಶವಿದ್ದರೂ ರೆಡ್ ಟೇಪಿಸಂ ಎಂಬ ಹಾವಳಿ ಎಲ್ಲಾ ಅಭಿವೃದ್ಧಿಗಳನ್ನೂ ಆಮೆವೇಗದಲ್ಲಿ ನಿಲ್ಲಿಸಿಬಿಟ್ಟಿತ್ತು.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಮಂಜೂರಾತಿ ಸಮಿತಿಗಳನ್ನು ರಚಿಸುವ ಮೂಲಕ ಕೈಗಾರಿಕೆಗಳಿಗೆ ಒಂದೇ ಸೂರಿನಡಿ ಕಂದಾಯ, ವಿದ್ಯುತ್, ಅಗ್ನಿಶಾಮಕ, ಅರಣ್ಯ, ಪರಿಸರ ಮಾಲಿನ್ಯ ಸೇರಿದಂತೆ ಹಲವು ರೀತಿಯ ಪ್ರಮಾಣಪತ್ರಗಳು ಹಾಗೂ ನಿರಾಕ್ಷೇಪಣಾ ಪತ್ರಗಳನ್ನು ಕೊಡುವ ವ್ಯವಸ್ಥೆಯನ್ನು ಏಕಗವಾಕ್ಷಿ ಪದ್ಧತಿ ಮೂಲಕ ಜಾರಿಗೆ ತಂದರು.

ಇದು ಕೈಗಾರಿಕಾ ವಲಯದಲ್ಲಿ ಕ್ರಾಂತಿಯನ್ನೇ ಮಾಡಿತ್ತು. ಕೇವಲ ಐಟಿ-ಬಿಟಿಯಷ್ಟೇ ಅಲ್ಲದೆ ಆಟೋಮೊಬೈಲ್, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ಟೋಲ್ ಮೇಕಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಹೂಡಿಕೆಯಾಯಿತು. ಇಂದು ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಆದಾಯ ಹಾಗೂ ಜಿಎಸ್ಟಿ ಪಾವತಿಸುವ ರಾಜ್ಯವಾಗಿದ್ದರೆ ಅದಕ್ಕೆ ಎಸ್.ಎಂ.ಕೃಷ್ಣ ಅವರ ದೂರದೃಷ್ಟಿ ಏಕಗವಾಕ್ಷಿ ಪದ್ಧತಿ ಪ್ರಮುಖ ಕಾರಣ.


ಭೂಮಿ ತಂತ್ರಾಂಶದ ಮೂಲಕ ಕಂದಾಯ ಇಲಾಖೆಯಲ್ಲಿ ಮಹಾಕ್ರಾಂತಿ..
ಮಾಹಿತಿ ತಂತ್ರಜ್ಞಾನದಲ್ಲಿ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಎಸ್.ಎಂ.ಕೃಷ್ಣ ಅವರು ಅದೇ ತಂತ್ರಜ್ಞಾನವನ್ನು ಆಡಳಿತ ಹಾಗೂ ಜನಸಾಮಾನ್ಯರ ಬದುಕಿನ ಸುಧಾರಣೆಗೆ ಬಳಸುವ ಮೂಲಕ ಗಣನೀಯ ಸಾಧನೆ ಮಾಡಿದರು.

2001 ರಲ್ಲಿ ಆರಂಭಗೊಂಡ ಭೂಮಿ ಸಾಫ್‌್ಟವೇರ್ ಕಂದಾಯ ದಾಖಲಾತಿಗಳಲ್ಲಿ ಇಂದಿಗೂ ಅಗ್ರಗಣ್ಯವಾಗಿದೆ. ಜೊತೆಗೆ ಕಾಲಕಾಲಕ್ಕೆ ಉನ್ನತೀಕರಣದ ಮೂಲಕ ಜನಸಾಮಾನ್ಯರ ಜೀವನಮಟ್ಟವನ್ನು ಸುಧಾರಣೆ ಮಾಡುತ್ತಿದೆ.ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕಂದಾಯ ದಾಖಲಾತಿಗಳನ್ನು ಕಾಗದರಹಿತವನ್ನಾಗಿ ಮಾಡುವ ಸಲುವಾಗಿ ರೂಪುಗೊಂಡ ಭೂಮಿ ಸಾಫ್‌್ಟವೇರ್ ಸುದೀರ್ಘ ಕಾಲದವರೆಗೂ ಚಾಲ್ತಿಯಲ್ಲಿದೆ.

ಈ ಮೊದಲೆಲ್ಲಾ ಒಂದು ಪಹಣಿ ಪಡೆಯಬೇಕಾದರೂ ವಾರಗಟ್ಟಲೆ ಕಂದಾಯ ಇಲಾಖೆಗೆ ಅಲೆಯಬೇಕಿತ್ತು. ಅಧಿಕಾರಿಗಳ ಮರ್ಜಿಯನ್ನು ಹಿಡಿಯಬೇಕಿತ್ತು. ಇದನ್ನು ತಪ್ಪಿಸಲು 2001 ಮತ್ತು 2002 ನೇ ಸಾಲಿನಲ್ಲಿ ತನ್ನ ಬಜೆಟ್ನಲ್ಲಿ ಎಸ್.ಎಂ.ಕೃಷ್ಣ ಭೂಮಿ ಸಾಫ್ಟ್ ವೇರ್ ಅನ್ನು ಘೋಷಿಸಿದ್ದರು. 2001ರ ಮಾರ್ಚ್ 31 ರಂದು ಅದಕ್ಕೆ ಆರಂಭಿಕವಾಗಿ ಕೆಲವೇ ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು, 2004 ರ ವೇಳೆಗೆ ಅದು ರಾಜ್ಯಾದ್ಯಂತ ಅನುಷ್ಠಾನಕ್ಕೆ ಜಾರಿಗೆ ಬಂದಿತು.

ಇಂದು ಅಂಗೈಯಲ್ಲಿರುವ ಮೊಬೈಲ್ನಲ್ಲೇ ಪಹಣಿಯನ್ನು ಪಡೆಯಬಹುದಾದಷ್ಟರ ಮಟ್ಟಿಗೆ ಭೂಮಿ ಸಾಫ್‌್ಟವೇರ್ ಅಭಿವೃದ್ಧಿಗೊಂಡಿದೆ.ಎಸ್.ಎಂ.ಕೃಷ್ಣ ಅವರನ್ನು ಸ್ಟಾರ್ ಸಂಸ್ಕೃತಿಯ ಮುಖ್ಯಮಂತ್ರಿ ಎಂದು ಲೇವಡಿ ಮಾಡುವವರಿಗೆ ಜನಸಾಮಾನ್ಯರ ದೈನಂದಿನ ಜೀವನ ಸುಧಾರಣೆಗೆ ಜಾರಿಗೊಳಿಸಿದಂತಹ ಅನೇಕ ಯೋಜನೆಗಳು ತಕ್ಕ ಉತ್ತರ ನೀಡುತ್ತಿದೆ.


ಮಹಿಳಾ ಸಬಲೀಕರಣದ ಮುಂಚೂಣಿ ನಾಯಕ
ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಆರಂಭಗೊಂಡ ಯೋಜನೆಗಳು ರಾಜ್ಯದಲ್ಲಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲೂ ಮಾದರಿಯಾಗಿ ಉಳಿದಿದ್ದು ಚಿರಸ್ಥಾಯಿಯಾಗಿವೆ. ಮಧ್ಯಾಹ್ನದ ಬಿಸಿಯೂಟ, ಸ್ತ್ರೀಶಕ್ತಿ ಸಂಘಟನೆಗಳು, ಭೂಮಿ ತಂತ್ರಾಂಶ ಸೇರಿದಂತೆ ಅನೇಕ ಯೋಜನೆಗಳು ರಾಜ್ಯದಲ್ಲಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲೂ ಜನಸಾಮಾನ್ಯರ ಬದುಕನ್ನು ಸುಧಾರಣೆ ಮಾಡುವಲ್ಲಿ ಮಾದರಿಯಾಗಿವೆ.

ಸ್ತ್ರೀ ಸಬಲೀಕರಣಕ್ಕೆ ಮೊಟ್ಟ ಮೊದಲ ಬಾರಿಗೆ ನೈಜ ಬುನಾದಿ ಹಾಕಿದ್ದು ಎಸ್.ಎಂ.ಕೃಷ್ಣ ಅವರು. ಆಗಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ಮೋಟಮ ಅವರನ್ನು ಮುಂಚೂಣಿಯಲ್ಲಿ ನಿಲ್ಲಿಸಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದರು.

ಆ ಸಂದರ್ಭದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದವು. ಮಹಿಳೆಯರನ್ನು ಅಡುಗೆಮನೆಯಿಂದ ಹೊರತಂದು ಏನು ಮಾಡಲು ಹೊರಟಿದ್ದಾರೆ ಎಂಬೆಲ್ಲಾ ವ್ಯಾಖ್ಯಾನಗಳು ಕೇಳಿಬಂದಿದ್ದವು. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಎಸ್.ಎಂ.ಕೃಷ್ಣ ಅವರು ದಿಟ್ಟ ನಿಲುವು ಮತ್ತು ನಿರ್ಧಾರದ ಮೂಲಕ ಸ್ತ್ರೀಶಕ್ತಿ ಸಂಘಗಳನ್ನು ಮುಂದುವರೆಸಿದ್ದರು. ಅದರ ಪರಿಣಾಮ ಇಂದು ಮಹಿಳೆಯರ ಸಶಕ್ತೀಕರಣಕ್ಕೆ ಆನೆಬಲ ಬಂದಂತಾಗಿದೆ.

ಸ್ತ್ರೀಶಕ್ತಿ ಸಂಘಗಳು ರಾಷ್ಟ್ರಮಟ್ಟದಲ್ಲಿ ಸ್ಥಾಪನೆಯಾಗಿವೆ. ಕೈಗಾರಿಕಾ ಉತ್ಪನ್ನ, ವಾಣಿಜ್ಯ ಚಟುವಟಿಕೆಗಳ ಮೂಲಕ ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿವೆ.
ಎಸ್.ಎಂ.ಕೃಷ್ಣ ಅವರು ತೆಗೆದುಕೊಂಡ ಹಲವು ಕ್ರಾಂತಿಕಾರಕ ನಿರ್ಧಾರಗಳು ಇಂದಿಗೂ ಪ್ರಸ್ತುತವಾಗಿವೆ.


ಬಡವರಿಗೆ ವರವಾದ ಯಶಸ್ವಿನಿ ಯೋಜನೆ
ಅನಾರೋಗ್ಯ ಪ್ರತಿಯೊಬ್ಬ ಬಡವರಿಗೂ ದೊಡ್ಡ ಶಾಪ. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಸಿಗುವುದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಹಣ ಖರ್ಚು ಮಾಡುವಷ್ಟು ಸಾಮರ್ಥ್ಯ ಇರುವುದಿಲ್ಲ. ಇಂತಹ ಸಂಕಷ್ಟ ಸಂದರ್ಭದಲ್ಲಿದ್ದವರಿಗೆ ಯಶಸ್ವಿನಿ ಯೋಜನೆ ವರದಾನವಾಗಿತ್ತು.

ಯಶಸ್ವಿನಿ ಯೋಜನೆ ಯನ್ನು 2003 ರಲ್ಲಿ ಜಾರಿಗೊಳಿಸುವ ಮೂಲಕ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದರು.ಸಹಕಾರ ಸಂಸ್ಥೆಗಳಲ್ಲಿ ಸದಸ್ಯರಾಗಿರುವ ರೈತರಿಗೆ ಗಂಭೀರ ಸ್ವರೂಪದ ಅನಾರೋಗ್ಯ ಕಾಣಿಸಿಕೊಂಡಾಗ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಟ್ರಸ್ಟ್ವೊಂದನ್ನು ರಚಿಸಿದರು. ಅದಕ್ಕಾಗಿ 1882 ರ ಇಂಡಿಯನ್ ಟ್ರಸ್ಟ್ ಕಾಯಿದೆಗೆ 2003 ರ ನವೆಂಬರ್ 10 ರಂದು ತಿದ್ದುಪಡಿ ಮಾಡಿದರು.

ಅದೇ ವರ್ಷದ ಜೂನ್ 1 ರಿಂದ ಯೋಜನೆ ಜಾರಿಗೆ ಬಂದಿತ್ತು. ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಸಂಘದ ಸದಸ್ಯರಿಗೆ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ನಗದುರಹಿತವಾಗಿ ಚಿಕಿತ್ಸೆ ಕೊಡಿಸಲು ಯಶಸ್ವಿನಿ ಯೋಜನೆ ಯಶಸ್ವಿಯಾಗಿತ್ತು.ಯೋಜನೆಗೆ ನೋಂದಾಯಿಸಿಕೊಳ್ಳಲು ಆರಂಭದಲ್ಲಿ ಸಹಕಾರ ಸಂಘಗಳ ಸದಸ್ಯರಿಂದ 710 ರೂ.ಗಳನ್ನು ಪಡೆಯಲಾಗುತ್ತಿತ್ತು. ಉಳಿದಂತೆ ಲಕ್ಷಾಂತರ ರೂ. ಖರ್ಚು ಮಾಡಿ ಚಿಕಿತ್ಸೆ ಕೊಡಲಾಯಿತು.

ಸುಮಾರು 300ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳನ್ನು ಆರಂಭದಲ್ಲಿ ಯೋಜನೆಯ ಎಂ ಪ್ಯಾನಲ್ಗೆ ಸೇರ್ಪಡೆಗೊಳಿಸಲಾಗಿತ್ತು. ಈಗ ಅದು 1200ಕ್ಕೂ ಹೆಚ್ಚು ಆಸ್ಪತ್ರೆಗಳ ಪಟ್ಟಿಯಾಗಿ ಬೆಳೆದಿದೆ.
ಈ ನಡುವೆ ಕೆಲಕಾಲ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಜನರ ಬೇಡಿಕೆಗನುಗುಣವಾಗಿ ಮರುಜಾರಿಗೊಳಿಸಲಾಗಿದ್ದು, ಗ್ರಾಮೀಣ ಭಾಗದ ಜೊತೆಗೆ ನಗರ ಪ್ರದೇಶದ ಸಹಕಾರ ಸಂಘದ ಸದಸ್ಯರಿಗೂ ವಿಸ್ತರಿಸಲಾಗಿದೆ.

RELATED ARTICLES

Latest News