ಬೆಂಗಳೂರು,ಜ.24- ನಾಡುನುಡಿ, ನೆಲಜಲ ರಕ್ಷಣೆಯಲ್ಲಿ ಕನ್ನಡಪರ ಸಂಘಟನೆಗಳ ಹೋರಾಟ ಶ್ಲಾಘನೀಯವಾಗಿದ್ದು, ಅಂಥ ಸಂಘಟನಾತಕ ಕೆಲಸದಲ್ಲಿ ಸಾ.ರಾ.ಗೋವಿಂದು ಅವರ ಪಾತ್ರ ಸರಣೀಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಶ್ಲಾಘಿಸಿದ್ದಾರೆ.
ಕನ್ನಡ ಸೇನಾನಿ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾಗೋವಿಂದು ಅಭಿನಂದನ ಸಮಾರಂಭದ ಪ್ರಯುಕ್ತ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ನಾಡಿನಲ್ಲಿ ವರನಟ ಡಾ.ರಾಜ್ಕುಮಾರ್ ಒಂದು ಅದ್ಭುತವಾದ ಶಕ್ತಿ.
ಅವರ ಹೆಸರಿನಲ್ಲಿ ಸಂಘಟನೆಯನ್ನು ಮುನ್ನಡೆಸುವುದು ಸಾಹಸವೇ ಸರಿ. ಆ ಜವಾಬ್ದಾರಿಯನ್ನು ಸಾ.ರಾ.ಗೋವಿಂದು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರು. ಕನ್ನಡಕ್ಕಾಗಿ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿ ಸಾ.ರಾ.ಗೋವಿಂದು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಗೋಕಾಕ್ ಚಳವಳಿಗೆ ಡಾ.ರಾಜ್ಕುಮಾರ್ ಅವರನ್ನು ಕರೆತರುವಲ್ಲಿ ಸಾ.ರಾ.ಗೋವಿಂದು ಅವರ ಪಾತ್ರ ಪ್ರಮುಖವಾಗಿತ್ತು ಎಂದರು.
ನಾಡಿಗೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬಿದೆ. ಈ ಕಾರ್ಯಕ್ರಮವನ್ನು ವರ್ಷಪೂರ್ತಿ ಆಚರಿಸಲಾಗುತ್ತಿದೆ. ಗೋಕಾಕ್ ಚಳುವಳಿಯನ್ನು ಭಾಗವಹಿಸಿದ್ದವರನ್ನು ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನಾನಿಸಲಾಯಿತು. ನಾಡಿನ ಹಿತರಕ್ಷಣೆಗಾಗಿ ದುಡಿದ ಎಲ್ಲಾ ಹೋರಾಟಗಾರರಿಗೂ ಈ ಸಂದರ್ಭದಲ್ಲಿ ಅಭಿನಂದನೆ ತಿಳಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಸಾ.ರಾ. ಗೋವಿಂದು, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಅಭಿನಂದನಾ ಸಮಿತಿ ಗೌರವ ಅಧ್ಯಕ್ಷ ಕೆ.ಸಿ.ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಸಿ.ಕೆ.ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಲಾಲ್ಬಾಗ್ ಪಶ್ಚಿಮ ದ್ವಾರದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಪೂರ್ಣ ಕುಂಭ ಸ್ವಾಗತ ಕೋರಲಾಯಿತು.
ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾತಂಡಗಳು ಅಭಿಮಾನಿಗಳು ಮತ್ತು ಆಟೋ ಚಾಲಕರ ಸಂಘಗಳ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ಪಾಲ್ಗೊಂಡಿದ್ದವು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹ ಸೇರಿದಂತೆ ಸಿನಿಮಾ ಕ್ಷೇತ್ರದ ಹಿರಿಯ ನಟರು ಕಲಾವಿದರು, ಕನ್ನಡ ಸಂಘಟನೆಗಳ ಸದಸ್ಯರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು. ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಾರಾ ಗೋವಿಂದು ಅವರ ಹೋರಾಟ ಮತ್ತು ಚಿತ್ರರಂಗದಲ್ಲಿನ ಅವರ ಸಾಧನೆಗಳನ್ನು ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿತ್ತು.