ಮುಂಬೈ, ಏ.2- ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಎರಡನೇ ಬಾರಿ ಏಕದಿನ ವಿಶ್ವಕಪ್ ಗೆದ್ದ ಸಂಭ್ರಮಕ್ಕೆ 13 ವರ್ಷಗಳು ಸಂದಿದ್ದು , ವಿಶ್ವಕಪ್ ವೀರರಿಗೆ ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಅಭಿನಂದನೆ ಸಲ್ಲಿಸಿದ್ದಾರೆ.
ತಮ್ಮ ಜೀವನದ ಅತ್ಯಂತ ಸ್ಮರಣೀಯ ದಿನವನ್ನು ತಮ್ಮ ಎಕ್ಸ್ ಖಾತೆ ಮೂಲಕ ಅಭಿನಂದಿಸಿರುವ ಸಚಿನ್ ತೆಂಡೂಲ್ಕರ್ ಅವರು, ನನ್ನ ಬಾಲ್ಯ ಜೀವನದ ಕನಸಾಗಿದ್ದ ಭಾರತ ತಂಡಕ್ಕೆ ವಿಶ್ವಕಪ್ ಗೆಲ್ಲಬೇಕೆಂಬ ಕನಸು ನನಸಾಗಿ ಇಂದಿಗೆ 13 ವರ್ಷಗಳು ಸಂದಿವೆ. ಆದರೆ ತಂಡದ ಆಟಗರರೊಂದಿಗೆ ಕಳೆದಿದ್ದ ನೆನಪುಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.
ನನ್ನ ಕನಸು ಈಡೇರಿಸಿದ ಸಹ ಆಟಗಾರರು ಅಭಿಮಾನಿಗಳು ಹಾಗೂ ಬೆಂಬಲ ನೀಡಿದ ದೇಶದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.ಏಪ್ರಿಲ್ 2, 2011ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಮಹೇಲಾ ಜಯವರ್ಧನೆ ( 103 ರನ್) ಶತಕದ ನೆರವಿನಿಂದ 50 ಓವರ್ಗಳ ಅಂತ್ಯಕ್ಕೆ 274/6 ರನ್ ಗಳಿಸಿದ್ದರು.
ಈ ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾ ಗೌತಮ್ ಗಂಭೀರ್ (97 ರನ್) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (91 ರನ್) ಅವರ ಅರ್ಧಶತಕಗಳ ನೆರವಿನಿಂದ 48.2 ಓವರ್ಗಳಲ್ಲೇ 277/4 ಗಳಿಸಿ ಗೆಲುವಿನ ದಡ ತಲುಪಿದ್ದರು. ಎಂಎಸ್ಡಿ ಪಂದ್ಯಶ್ರೇಷ್ಠ ಹಾಗೂ ಯುವರಾಜ್ ಸಿಂಗ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು.