ಮುಂಬೈ,ಜ.19- ಬಾಲಿವುಡ್ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದ್ದ ಚಿತ್ರನಟ ಸೈಫ್ ಅಲಿಖಾನ್‌ಗೆ ಚಾಕು ಇರಿದು ಪರಾರಿಯಾಗಿದ್ದ ಪ್ರಮುಖ ಆರೋಪಿಯನ್ನು ಕೊನೆಗೂ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಬಾಂಗ್ಲಾ ದೇಶದ ಪ್ರಜೆಯಾಗಿರುವ ಮೊಹಮದ್ ಶರೀಫವುಲ್ಲಾ ಇಸ್ಲಾಮ್ ಷಹಜಾದ್ ಅಲಿಯಾಸ್ ಬಿಜೋಯ್‌ದಾಸ್ ಎಂದು ಗುರುತಿಸಲಾಗಿದ್ದು, ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ನಿವಾಸಿಯಾಗಿದ್ದ ಎಂದು ತಿಳಿದುಬಂದಿದೆ.
ಘಟನೆ ನಡೆದ ನಂತರ ಮುಂಬೈನಿಂದ ಪುಣೆಗೆ ತೆರಳಿ ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತನ ದಾಖಲೆಗಳನ್ನು ಪರಿಶೀಲಿಸಿದಾಗ ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ಸೈಫ್ ಅಲಿಖಾನ್‌ಗೆ ಚಾಕು ಇರಿದಿರುವುದನ್ನು ಒಪ್ಪಿಕೊಂಡಿರುವುದಾಗಿ ಪುಣೆ ಡಿಸಿಪಿ ದೀಕ್ಷಿತ್ ಗೆಡಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಈತ ಬಾಂಗ್ಲಾದೇಶದವನಾಗಿದ್ದು, ನಕಲಿ ದಾಖಲೆ ಬಳಸಿ ಭಾರತದೊಳಗೆ ನುಸುಳಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈತನ ಬಳಿ ಯಾವುದೇ ಭಾರತೀಯ ದಾಖಲೆಗಳಿಲ್ಲದಿರುವುದರಿಂದ ಪಾಸ್‌ಪೋರ್ಟ್ ಕಾಯ್ದೆಯಡಿ ಬಂಧಿಸಲಾಗಿದ್ದು, ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿ ಬಾಂಗ್ಲಾದೇಶದವನೆಂದು ಸೂಚಿಸುವ ಕೆಲವು ವಸ್ತುಗಳನ್ನು ಆತನಿಂದ ವಶಪಡಿಸಿಕೊಂಡಿದ್ದೇವೆ. ಅವನು ಭಾರತಕ್ಕೆ ಅಕ್ರಮವಾಗಿ ಬಂದು ತನ್ನ ಹೆಸರನ್ನು ಬಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದಾನೆ.
ಮೊಹಮದ್ ಸರಿಫುಲ್ ಇಸ್ಲಾಂ ಶೆಹಜಾದ್ ವಿಜಯ್‌ದಾಸ್, ಬಿಜೋಯ್ ದಾಸ್ ಮತ್ತು ಮೊಹಮದ್ ಇಲಿಯಾಸ್ ಸೇರಿದಂತೆ ಹಲವು ಹೆಸರುಗಳನ್ನು ಇಟ್ಟುಕೊಂಡು ಸುಮಾರು ನಾಲ್ಕು ತಿಂಗಳಿನಿಂದ ಮುಂಬೈ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುತ್ತಿದ್ದ.
ಮುಂಬೈನ ಪಬ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಮೊದಲ ಬಾರಿಗೆ ನಟ ಸೈಫ್ ಅಲಿಖಾನ್ ನಿವಾಸ ಪ್ರವೇಶಿಸಿದ್ದಾನೆ. ದರೋಡೆ ಮಾಡುವ ಉದ್ದೇಶದಿಂದಲೇ ಆತ ಮನೆಗೆ ಪ್ರವೇಶಿಸಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕಸ್ಟಡಿಗೆ ಪಡೆಯಲಾಗುವುದು. ನಂತರ ಹೆಚ್ಚಿನ ತನಿಖೆ ನಡೆಯಲಿದೆ.
ಮೊಬೈಲ್ ಟವರ್ ಲೊಕೇಶನ್ ಸಹಾಯದಿಂದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಆರೋಪಿ ಮೊಹಮದ್ ಸಜ್ಜದ್ ಅಲಿಯಾಸ್ ವಿಜಯ್ ದಾಸ್ ಮೊಬೈಲ್ ಟವರ್ ಲೊಕೇಶನ್ ವಡವ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರಾನಂದನಿ ಎಸ್ಟೇಟ್‌ನಲ್ಲಿ ಪತ್ತೆಯಾಗಿತ್ತು.
ಬಿಜೋಯ್ ದಾಸ್ ಕೆಲವು ವರ್ಷಗಳಿಂದ ಹಿರಾನಂದಾನಿ ಪ್ರದೇಶದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹಿರನಂದಾನಿ ಕಾರ್ಮಿಕರ ಕ್ಯಾಂಪ್ ಬಳಿ ಬಂಧಿಸಿದ್ದಾರೆ ಎಂದು ಹಿರಿಯ ಮುಂಬೈ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ವಿವರ: ಗುರುವಾರ ನಸುಕಿನಜಾವ ಮುಂಬೈನ ಬಾಂದ್ರಾದಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿ, ನಟನಿಗೆ ಚಾಕುವಿನಿಂದ 6 ಬಾರಿ ಇರಿದು ಪರಾರಿಯಾಗಿದ್ದ. ಇರಿತದಿಂದ ಸೈಫ್ ಅಲಿಖಾನ್ ಅವರ ಬೆನ್ನುಮೂಳೆ ಮತ್ತು ಕುತ್ತಿಗೆಯ ಬಳಿ ಗಂಭೀರ ಗಾಯಗಳಾಗಿದ್ದವು. ನಂತರ ಅವರನ್ನು ಆಟೋರಿಕ್ಷಾದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ವೈದ್ಯರು ಐದು ಗಂಟೆಗಳ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ನಟನ ಬೆನ್ನುಮೂಳೆಯಿಂದ 2.5 ಇಂಚಿನ ಬ್ಲೇಡ್ ತುಂಡನ್ನು ಹೊರ ತೆಗೆದಿದ್ದರು. ಇದೀಗ ನಟ ಚೇತರಿಸಿಕೊಳ್ಳುತ್ತಿದ್ದಾರೆ. ಜನವರಿ 21ರೊಳಗೆ ಅವರನ್ನು ಡಿಸ್ಚಾರ್ಜ್ ಮಾಡುವ ನಿರೀಕ್ಷೆಯಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ದಾಳಿ ಮಾಡಿದ ವ್ಯಕ್ತಿ ಮನೆಯಿಂದ ಕಳ್ಳತನ ಮಾಡುವ ಉದ್ದೇಶ ಹೊಂದಿರುವಂತೆ ತೋರಲಿಲ್ಲ. ಮಗನನ್ನು ರಕ್ಷಿಸಲು ಸೈಫ್ ಮುಂದಾದಾಗ ದಾಳಿಕೋರ ನಿರಂತರವಾಗಿ ದಾಳಿ ಮಾಡಿದ್ದಾನೆ. ಮನೆಯೊಳಗೆ ನುಗ್ಗಿದ ಆ ವ್ಯಕ್ತಿ ಬಹಳ ಆಕ್ರಮಣಕಾರಿಯಾಗಿದ್ದರೂ ಆಭರಣಗಳು ಸೇರಿದಂತೆ ತಮ ಮನೆಯಲ್ಲಿ ಯಾವುದೇ ವಸ್ತುಗಳು ಕಳುವಾಗಿಲ್ಲ ಎಂದು ಸೈಫ್ ಪತ್ನಿ ಕರೀನಾ ಪೊಲೀಸರಿಗೆ ತಿಳಿಸಿದ್ದಾರೆ.
ಈ ಪ್ರಕರಣ ಬೇಧಿಸಲು ಪೊಲೀಸರು 30ಕ್ಕೂ ಹೆಚ್ಚು ತಂಡಗಳನ್ನು ರಚಿಸಿ, ಶೋಧ ಕಾರ್ಯಾಚರಣೆ ಇಳಿದಿದ್ದಾರೆ.ಬುಧವಾರ ತಡರಾತ್ರಿ ಸೈಫ್ ಅಲಿ ಖಾನ್‌ರ ಮುಂಬೈನ ಬಾಂದ್ರಾದ ಮನೆಗೆ ನುಗ್ಗಿದ್ದ ಆರೋಪಿ, ಸೈಫ್ ಅಲಿಖಾನ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದ.
ಸೈಫ್ ಅಲಿ ಖಾನ್‌ರ ಹೊಟ್ಟೆ, ಕತ್ತು, ಬೆನ್ನಿಗೆ ಆರು ಬಾರಿ ಇರಿದಿದ್ದ ಆರೋಪಿ ಸ್ಥಳದಿಂದ ಪರಾರಿ ಆಗಿದ್ದ. ಕೂಡಲೇ ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೈಫ್ ಅಲಿ ಖಾನ್ ಬೆನ್ನಿನಿಂದ 2.50 ಇಂಚಿನ ಚಾಕುವನ್ನು ಹೊರತೆಗೆಯಲಾಗಿತ್ತು. ಸೈಫ್ ಅಲಿ ಖಾನ್ ಪ್ರಾಣಾಪಾಯದಿಂದ ಪಾರಾಗಿದ್ದು ಈಗ ಚೇತರಿಕೆಯ ಹಾದಿಯಲ್ಲಿದ್ದಾರೆ. ಇಂದೇ ಸೈಫ್ ಅಲಿ ಖಾನ್ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.