ರಾಯಚೂರು, ಆ.2-ಮಾಂಸಾಹಾರ ಸೇವಿಸಿದ ಒಂದೇ ಕುಟುಂಬದ ನಾಲ್ವರು ಮೃತಪಟ್ಟು ಮತ್ತೊಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಜಿಲ್ಲೆಯ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದ ನಿವಾಸಿಗಳಾದ ಭೀಮಣ್ಣ(60) ಮತ್ತು ಈರಮ(54) ದಂಪತಿ ಹಾಗೂ ಮಕ್ಕಳಾದ ಮಲ್ಲೇಶ್(19) ಹಾಗೂ ಪಾರ್ವತಿ(16) ಮೃತಪಟ್ಟ ದುರ್ದೈವಿಗಳು.ಮತ್ತೊಬ್ಬ ಮಗಳು ಮಲ್ಲಮ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರ ಮನೆಯಲ್ಲಿ ಬುಧವಾರ ಮಾಂಸದ ಅಡುಗೆ ಮಾಡಲಾಗಿತ್ತು. ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದ ದಂಪತಿ ಈ ಆಹಾರವನ್ನು ಸೇವಿಸಿದ್ದಾರೆ. ಮನೆಯಲ್ಲಿದ್ದ ಮಕ್ಕಳೂ ಸಹ ಊಟ ಮಾಡಿದ್ದಾರೆ.
ಆಹಾರ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಮಧ್ಯಾಹ್ನ ಎಲ್ಲರಿಗೂ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿಯಾಗಿದೆ. ತಕ್ಷಣ ನೆರೆಹೊರೆಯವರು ಇವರ ನೆರವಿಗೆ ದಾವಿಸಿ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ದಂಪತಿ ಸೇರಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮತ್ತೊಬ್ಬ ಮಗಳ ಸ್ಥಿತಿ ಗಂಭೀರವಾಗಿದೆ. ಸುದ್ದಿ ತಿಳಿದು ಸಿರವಾರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫುಡ್ ಪಾಯಿಸನ್ ಶಂಕೆ:
ಒಂದು ಕಡೆ ಪೊಲೀಸರು ಫುಡ್ ಪಾಯಿಸನ್‌ನಿಂದ ಈ ದುರಂತ ಸಂಭವಿಸಿರಬಹುದೆಂಬ ಅನುಮಾನ ವ್ಯಕ್ತಪಡಿಸಿದರೆ, ಮತ್ತೊಂದೆಡೆ ಸ್ಥಳೀಯರು ಕೌಟುಂಬಿಕ ಕಲಹದಿಂದ ಕುಟುಂಬದವರೆಲ್ಲಾ ಆತಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸುತ್ತಿದ್ದಾರೆ.
ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿರುವ ಪೊಲೀಸರು ಹಾಗೂ ಕುಟುಂಬದವರು ಸೇವಿಸಿದ ಆಹಾರವನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಿ, ಸಾವಿಗೆ ನಿಖರ ಕಾರಣವೇನೆಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.