ಲಕ್ನೊ,ಅ.3- ಇರುವುದೊಂದೇ ಧರ್ಮ, ಅದುವೇ ಸನಾತನ ಧರ್ಮ, ಉಳಿದೆಲ್ಲವೂ ಪಂಥಗಳು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ಕುರಿತಂತೆ ನೀಡಿದ ಹೇಳಿಕೆ ದೇಶಾದ್ಯಂತ ವಿವಾದದ ಕಿಡಿ ಸೃಷ್ಟಿಸಿತ್ತು. ಇದೀಗ ಹಿಂದೂ ಫೈರ್‍ಬ್ರಾಂಡ್ ಎಂದೇ ಗುರುತಿಸಿಕೊಂಡಿರುವ ಬುಲ್ಡೋಜರ್ ಖ್ಯಾತಿಯ ಯೋಗಿ ಆದಿತ್ಯನಾಥ್ ಅವರು ಇರುವುದೊಂದೇ ಸನಾತನ ಧರ್ಮ, ಉಳಿದೆಲ್ಲವೂ ಪಂಥಗಳು ಎನ್ನುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.
ಸನಾತನ ಧರ್ಮವು ಮಾನವೀಯತೆಯನ್ನು ಬೋಧಿಸುತ್ತದೆ. ಯಾರನ್ನೂ ಮೇಲು, ಕೀಳು ಎಂದು ನೋಡುವುದಿಲ್ಲ. ಎಲ್ಲರೂ ಸಮಾನರು ಎಂಬುದೇ ಅದರ ತಿರುಳು. ಸನಾತನ ಧರ್ಮದ ಮೇಲೆ ದಾಳಿ ನಡೆಸಿದರೆ ವಿಶ್ವದ ಮಾನವೀಯತೆ ಮೇಲೆ ನಡೆದ ದಾಳಿ ಎಂದು ಅಭಿಪ್ರಾಯಪಟ್ಟರು.
ಧಾರ್ಮಿಕ ಆಚರಣೆಗಳು ಬೇರೆ ಬೇರೆ ಇರಬಹುದು. ನಂಬಿಕೆಯು ವಿಭಿನ್ನವಾಗಿರಬಹುದು. ಸನಾತನ ಧರ್ಮ ಮಾತ್ರ ಎಲ್ಲರೂ ಒಂದೇ ಎಂದು ಬೋಧಿಸುವ ಏಕೈಕ ಧರ್ಮ. ಅದರ ಬಗ್ಗೆ ಲಘುವಾಗಿ ಮಾತನಾಡಬಾರದು ಎಂದು ಮನವಿ ಮಾಡಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಡಿಕೆಶಿ ಗುಡುಗು
ತಮ್ಮ ಸ್ವಕ್ಷೇತ್ರ ಗೋರಖ್ಪುರದಲ್ಲಿ ನಡೆದ ಶ್ರೀಮದ್ ಭಾಗವತಾ ಕಥಾಜ್ಞಾನಯಾಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ಕೆಲವರು ತಪ್ಪು ವ್ಯಾಖ್ಯಾನಗಳನ್ನು ಕಲ್ಪಿಸಿಕೊಂಡಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ಧರ್ಮದ ಸ್ಥಾಪಕರು ಆಚರಣೆ, ವಿಚಾರಣೆಗಳ ಬಗ್ಗೆ ಅನಾದಿ ಕಾಲದಿಂದಲೂ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಆದರೂ ಈ ಧರ್ಮವನ್ನು ಯಾರೂ ಕೂಡ ಮುಟ್ಟಲು ಸಾಧ್ಯವಾಗಿಲ್ಲ ಎಂದು ಎಚ್ಚಿಸಿದರು.
ಸಂಕುಚಿತ ಮನೋಭಾವದಿಂದ ನೋಡಿದಾಗ ಎಲ್ಲಾ ಧರ್ಮಗಳೂ ನಮಗೆ ಕ್ಷುಲ್ಲಕವಾಗಿಯೇ ಕಾಣಿಸುತ್ತವೆ. ನಾವು ವಿಶಾಲ ಮನೋಭಾವದಿಂದ ನೋಡಿದಾಗ ಮಾತ್ರ ಧರ್ಮದ ಸಾರ ಏನೆಂಬುದು ಅರ್ಥವಾಗುತ್ತದೆ. ಸನಾತನ ಧರ್ಮದ ಬಗ್ಗೆ ಹಲವಾರು ವರ್ಷಗಳಿಂದ ಟೀಕೆ ಟಿಪ್ಪಣಿಗಳು ಬರುತ್ತಲೇ ಇವೆ. ಆದರೂ ಯಾವುದಕ್ಕೂ ಜಗ್ಗದೇ ಈ ಧರ್ಮ ದಿನದಿಂದ ದಿನಕ್ಕೆ ಪ್ರಬಲವಾಗಿ ಬೆಳೆದಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.