ಬೆಂಗಳೂರು,ಸೆ.1- ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ, ನಟ ಎಸ್.ಎಸ್. ಡೇವಿಡ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ನಿನ್ನೆ ಡೇವಿಡ್ ಅವರು ಮೆಡಿಕಲ್ ಶಾಪ್ ಗೆ ತೆರಳಿ ಮನೆಗೆ ವಾಪಸ್ಸಾಗುವ ವೇಳೆ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ರಾಜರಾಜೇಶ್ವರಿ ನಗರದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 7.30 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ನಿರ್ದೇಶನ, ಚಿತ್ರಕಥೆ ಹಾಗೂ ತಮ ವಿಶಿಷ್ಟ ಮ್ಯಾನರಿಸಂ ಸಂಭಾಷಣೆಯಿಂದಲೇ ಸ್ಯಾಂಡಲ್ವುಡ್ನಲ್ಲಿ ಹೆಸರು ಗಳಿಸಿದ್ದ ಡೇವಿಡ್ ಅವರು ಸಾಯಿಕುಮಾರ್ ನಟನೆಯ ಪೊಲೀಸ್ ಸ್ಟೋರಿ, ಅಗ್ನಿ ಐಪಿಎಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮಂಡ್ಯ, ಕಿಚ್ಚ ಸುದೀಪ್ ನಟನೆಯ ತಿರುಪತಿ ಮುಂತಾದ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದರಲ್ಲದೆ, ಗಡಿಪಾರು, ಪೊಲೀಸ್ ಡಾಗ್ ಸೇರಿದಂತೆ ಹಲವು ಸಿನಿಮಾಗಳಿಗೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ.
ಎಸ್.ಎಸ್.ಡೇವಿಡ್ ಅವರ ನಿಧನಕ್ಕೆ ಸಾಹಸ ನಿರ್ದೇಶಕ ಥ್ರಿಲ್ಲರ್ಮಂಜು ಸೇರಿದಂತೆ ಹಲವಾರು ಕಲಾವಿದರು, ಸಾಹಸ ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.
ಥ್ರಿಲ್ಲರ್ ಮಂಜು ಸಂತಾಪ:
ಡೇವಿಡ್ ಅವರು ಮದುವೆ ಆಗಿರಲಿಲ್ಲ ಅವರ ಚಿಕ್ಕಮ್ಮನ ಮಗಳು ಕಾಪುವಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಡೇವಿಡ್ ಒಬ್ಬರೇ ನೆಲೆಸಿದ್ದರು ಎಂದು ಥ್ರಿಲ್ಲರ್ ಮಂಜು ಹೇಳಿದ್ದಾರೆ.
ನನ್ನ ನಿರ್ದೇಶನದ ಪೊಲೀಸ್ ಸ್ಟೋರಿ ಚಿತ್ರಕ್ಕೆ ಡೇವಿಡ್ ಅವರು ಕಥೆ, ಸಂಭಾಷಣೆ ಬರೆದಿದ್ದರು. ಅಗ್ನಿ ಐಪಿಎಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದರು.
ಓಂ ನಮಃ ಶಿವಾಯ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಅವರ ನಿರ್ದೇಶನದಲ್ಲಿ ಪೊಲೀಸ್ ಡಾಗ್, ಸುಪಾರಿ ಚಿತ್ರಗಳಲ್ಲಿ ನಾನು ನಟಿಸಿದ್ದೆ. ಪೊಲೀಸ್ ಸ್ಟೋರಿ- 2 ಚಿತ್ರಕ್ಕೂ ಡೇವಿಡ್ ಅವರು ಕಥೆ ಬರೆದಿದ್ದರು. ಬಳಿಕ ಬಹಳ ವರ್ಷ ಗ್ಯಾಪ್ ಆಗಿತ್ತು. 2010ರ ಬಳಿಕ ಸಂಕರ್ಕಕ್ಕೆ ಸಿಗುತ್ತಿರಲಿಲ್ಲ. 3 ವರ್ಷದ ಹಿಂದೆ ಒಮ್ಮೆ ಭೇಟಿ ಆಗಿದ್ದೆ ಎಂದು ಥ್ರಿಲ್ಲರ್ ಮಂಜು ನೆನಪಿಸಿಕೊಂಡಿದ್ದಾರೆ.ಡೇವಿಡ್ ಅವರ ಅಂತ್ಯಕ್ರಿಯೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಥ್ರಿಲ್ಲರ್ ಮಂಜು ಅವರು ಹೇಳಿದ್ದಾರೆ.