ನವದೆಹಲಿ,ಮಾ.29-ಕೆ.ಕೆ ಬಿರ್ಲಾ ಪ್ರತಿಸ್ಥಾನವು ಕೊಡ ಮಾಡುವ 2024 ನೇ ಸಾಲಿನ ಪ್ರತಿಷ್ಠಿತ ಸರಸ್ವತಿ ಸಮ್ಮಾನ್‌ಗೆ ಪ್ರಸಿದ್ಧ ಸಂಸ್ಕೃತ ವಿದ್ವಾಂಸ ಮಹಾಮಹೋಪಾದ್ಯಾಯ ಸಾಧು ಭದ್ರೇಶ್ ದಾಸ್ ಅವರು ಭಾಜನರಾಗಿದ್ದಾರೆ. ಸಾಧು ಭದ್ರೇಶ್‌ದಾಸ್ ಅವರ ಸ್ವಾಮಿ ನಾರಾಯಣ ಸಿದ್ಧಾಂತ ಸುಧಾ ಸಂಸ್ಕೃತ ಕೃತಿಗೆ ಈ ಗೌರವ ಲಭಿಸಿದೆ.
ಮಹಾರಾಷ್ಟ್ರದ ನಾಂದೇಡ್‌ನಲ್ಲಿ 1966 ರ ಡಿಸೆಂಬರ್ 12 ರಂದು ಜನಿಸಿರುವ ಸಾಧು ಅವರು ವರ್ಣರಂಜಿತ ಶೈಕ್ಷಣಿಕ ದಾಖಲೆ ಹೊಂದಿದ್ದು, ಎಂ.ಎ, ಪಿಹೆಚ್.ಡಿ. ಡಿ.ಲಿಟ್ ಮತ್ತು ಐಐಟಿ ಖರಗ್‌ಪುರ್ ನಿಂದ ಡಾಕ್ಟರ್ ಆಫ್‌ಸೈನ್ಸ್ ಪದವಿಗಳನ್ನು ಗಳಿಸಿದ್ದಾರೆ ಇವರು ಭಾರತೀಯ ತತ್ವಜ್ಞಾನದ ಪ್ರಮುಖ ವಿದ್ವಾಂಸರಾಗಿ ಗುರುತಿಸಿಕೊಂಡಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಫಿಲಾಸಫಿಕಲ್ ರಿಸರ್ಚ್ (ಐಸಿಪಿಆರ್) ನಿಂದ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿರುವ ಸಾಧು ಭದ್ರೇಶ್‌ದಾಸ್ ಅವರಿಗೆ ಥಾಯ್ಲೆಂಡಿನ ಶಿಲ್ಪಾಕಾರ್ನ್ ವಿಶ್ವವಿದ್ಯಾನಿಲಯವು ವೇದಾಂತ ಮಾರ್ತಾಂಡ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಸ್ತುತ ಇವರು ಬಿಎಪಿಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2022 ರಲ್ಲಿ ಪ್ರಕಟವಾದ ಸ್ವಾಮಿ ನಾರಾಯಣ ಸಿದ್ಧಾಂತ ಸುಧಾ ಕೃತಿಯು ಪ್ರಸ್ಥಾನತ್ತಯೀ ವಿಷಯವನ್ನು ಒಳಗೊಂಡಿದ್ದು ಅಕ್ಷರ ಪುರುಷೋತ್ತಮ ದರ್ಶನ ಸಿದ್ಧಾಂತ ದೃಷ್ಟಿಕೋನವನ್ನು ಸರಳವಾಗಿ ಆದರೆ ಪಾರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಈ ಕೃತಿಯು ಭಾರತದಲ್ಲಿ ಅನೇಕ ಸೈದ್ದಾಂತಿಕ ಸಂಶೋಧನೆಗಳಿಗೆ ಆಕರವಾಗಿದೆ.
ಸರಸ್ವತಿ ಸಮ್ಮಾನ್ 1991 ರಲ್ಲಿ ಕೆ.ಕೆ. ಬಿರ್ಲಾ ಫೌಂಡೇಷನ್ ಸ್ಥಾಪಿಸಿರುವ ಒಂದು ಸಾಹಿತ್ಯಕ ಪ್ರಶಸ್ತಿಯಾಗಿದೆ. ಇದು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಉಲ್ಲೇಖಿಸಲಾಗಿರುವ ಯಾವುದೇ ಭಾರತೀಯ ಭಾಷಾ ಕೃತಿಗೆ ನೀಡುವ ವಾರ್ಷಿಕ ಪ್ರಶಸ್ತಿಯಾಗಿದೆ. ಕಳೆದ 10 ವರ್ಷಗಳಲ್ಲಿ ಭಾರತೀಯ ಪ್ರಜೆಯಿಂದ ರಚಿತವಾಗಿರುವ ಕೃತಿಯನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪ್ರಶಸ್ತಿಯು ಹದಿನೈದು ಲಕ್ಷ (15 ಲಕ್ಷ) ರೂಪಾಯಿಗಳ ನಗದು ಬಹುಮಾನ, ಬಿನ್ನವತ್ತಳೆ ಮತ್ತು ಸ್ಮರಣಿಕೆನ್ನೊಳಗೊಂಡಿದೆ.