Sunday, June 30, 2024
Homeರಾಜಕೀಯಲೋಕಸಭೆ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್‌‍ನಲ್ಲಿ ಮೂಲ-ವಲಸಿಗರ ನಡುವೆ ಕಿತ್ತಾಟ ಜೋರು

ಲೋಕಸಭೆ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್‌‍ನಲ್ಲಿ ಮೂಲ-ವಲಸಿಗರ ನಡುವೆ ಕಿತ್ತಾಟ ಜೋರು

ಬೆಂಗಳೂರು,ಜೂ.7-ಲೋಕಸಭೆಯ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್‌‍ನಲ್ಲಿ ಮೂಲ ಹಾಗೂ ವಲಸಿಗ ಕಾಂಗ್ರೆಸಿಗರ ನಡುವೆ ಒಳಬೇಗುದಿ ಹೆಚ್ಚಾಗಿದ್ದು, ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ್‌ ಸವದಿ ವಿರುದ್ದ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಗೆದ್ದಿದೆ. ಅಥಣಿಯಲ್ಲೂ ಕಾಂಗ್ರೆಸ್‌‍ ಗೆದ್ದಿದೆ ಎಂದು ಹೇಳಲಾಗುತ್ತಿದೆ. ಇಲ್ಲಿಂದ ನಾವು 30ರಿಂದ 40 ಸಾವಿರ ಲೀಡ್‌ಗಳನ್ನು ನಿರೀಕ್ಷಿಸಿದ್ದೆವು. ಆದರೆ ಚುನಾವಣಾ ಪ್ರಚಾರದಲ್ಲಿ ಶಾಸಕರು ತೊಡಗಿಸಿಕೊಳ್ಳದೆ ನಂಬಿಕೆಗೆ ಮಹಾಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಮಹೇಶ್‌ ಕುಮ್ಟಳ್ಳಿ ಬಳಿಕ ಕಾಂಗ್ರೆಸ್‌‍ ಗೆದ್ದಿರಲಿಲ್ಲ. ಲಕ್ಷ್ಮಣ್‌ ಸವದಿ ಕಾಂಗ್ರೆಸ್‌‍ಗೆ ಬಂದಾಗ ಆಶಾಕಿರಣ ಬಂದಂತಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಅವರು ಪಕ್ಷದ ತರಬೇತಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿರಲಿಲ್ಲ. ಚುನಾವಣಾ ಕಾಲದಲ್ಲಿ ಅವರಿಗೆ ಕ್ಷೇತ್ರದ ಪೂರ್ಥಿ ಜವಾಬ್ದಾರಿ ನೀಡಲಾಗಿತ್ತು. ಅವರು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೆ ನಿಧಾನಗತಿ ಅನುಸರಿಸಿದರು. ತಾವು ಅನುಮಾನಗೊಂಡು ಸ್ಥಳೀಯ ಮೂಲಕ ಕಾರ್ಯಕರ್ತರಿಗೆ ಎಚ್ಚರದಿಂದ ಕೆಲಸ ಮಾಡುವಂತೆ ಸಲಹೆ ನೀಡಿದ್ದಾಗಿ ತಿಳಿಸಿದರು.

ಅವರ ಉದ್ದೇಶ ಏನಿತ್ತೋ ಗೊತ್ತಿಲ್ಲ. ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕು ಎಂದುಕೊಂಡಿದ್ದರೋ ಮಾಹಿತಿ ಇಲ್ಲ. ಆದರೆ ಕಾಂಗ್ರೆಸ್‌‍ ಪಕ್ಷಕ್ಕೆ ಅವರಿಂದ ಮೋಸ ಆಗಿದ್ದಂತೂ ನಿಜ ಎನ್ನುವ ಮೂಲಕ ಹೆಸರು ಹೇಳದೆ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ.

ನಾಯಕರು ಬರುತ್ತಾರೆ ಹೋಗುತ್ತಾರೆ ಆದರೆ ಕಾರ್ಯಕರ್ತರು ಸ್ಥಿರವಾಗಿದ್ದಾರೆ. ಹಲವಾರು ನಾಯಕರು ಬದಲಾವಣೆಯಾದರೂ ಮೂಲ ಕಾಂಗ್ರೆಸಿಗರು ಪಕ್ಷ ನಿಷ್ಠೆ ತೊರೆದಿಲ್ಲ. ಇದೇ ನಮ ಶಕ್ತಿ. ಇನ್ನು ಮುಂದೆ ನಮೊಂದಿಗೆ ನೇರವಾಗಿ ಸಂಪರ್ಕದಲ್ಲಿರಿ ಅಭಿವೃದ್ಧಿ ಕೆಲಸಗಳನ್ನು ಮಾಡೋಣ ಎಂದು ಹೇಳುವ ಮೂಲಕ ಸತೀಶ್‌ಜಾರಕಿಹೊಳಿ ರಾಜ್ಯ ರಾಜಕೀಯದಲ್ಲಿ ಹೊಸ ಗೊಂದಲಕ್ಕೆ ಕಾರಣರಾಗಿದ್ದಾರೆ.

ನಿನ್ನೆ ಸತೀಶ್‌ ಜಾರಕಿಹೊಳಿಯವರ ಸಹೋದರ ಹಾಗೂ ಪಕ್ಷೇತರ ವಿಧಾನಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಕಿಡಿಕಾರಿದ್ದರು. ಈಗ ಸತೀಶ್‌ ಜಾರಕಿಹೊಳಿ ವಲಸಿಗ ನಾಯಕ ಲಕ್ಷ್ಮಣ್‌ ಸವದಿ ವಿರುದ್ಧವೇ ಕೆಂಡಕಾರಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯಿತ ಸಮುದಾಯದ ಜಗದೀಶ್‌ಶೆಟ್ಟರ್‌, ಲಕ್ಷ್ಮಣ್‌ ಸವದಿ ಬಿಜೆಪಿ ಟಿಕೆಟ್‌ ವಂಚಿತರಾಗಿದ್ದರು. ಅವರನ್ನು ಸೆಳೆದುಕೊಂಡ ಕಾಂಗ್ರೆಸ್‌‍ ಬಿ ಫಾರಂ ಕೊಟ್ಟು ಅಖಾಡಕ್ಕಿಳಿಸಿತ್ತು. ಜಗದೀಶ್‌ ಶೆಟ್ಟರ್‌ ಸೋಲು ಕಂಡರೆ ಲಕ್ಷ್ಮಣ್‌ ಸವದಿ ಗೆಲುವು ಕಂಡಿದ್ದರು.

ಬೆಳಗಾವಿ ಜಿಲ್ಲೆಯ ರಾಜಕಾರಣ ರಾಜ್ಯದ ಮಟ್ಟಿಗೆ ಸಿಡಿಮದ್ದಿನಂತಿತ್ತು. ಈ ಹಿಂದೆ ಕಾಂಗ್ರೆಸ್‌‍-ಜೆಡಿಎಸ್‌‍ ಸಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್‌‍ ಸರ್ಕಾರದ ಅವಧಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಜಿಲ್ಲೆಯ ಒಳಬೇಗುದಿಗಳು ಲೋಕೋಪಯೋಗಿ ಚುನಾವಣೆ ಬಳಿಕ ಹಂತ ಹಂತವಾಗಿ ಬಯಲಿಗೆ ಬರಲಾರಂಭಿಸಿವೆ.

RELATED ARTICLES

Latest News