ನವದೆಹಲಿ,ಏ.25- ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಬಗ್ಗೆ ಅಪೇಕ್ಷಾರ್ಹ ಪದ ಬಳಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ.
ಯಾವುದೇ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡುವುದು ಇಲ್ಲವೇ ಆಕ್ಷೇಪಾರ್ಹ ಪದ ಬಳಕೆ ಮಾಡುವುದನ್ನು ನ್ಯಾಯಾಲಯ ಒಪ್ಪುವುದಿಲ್ಲ, ಇಂಥ ಹೇಳಿಕೆಗಳನ್ನು ನ್ಯಾಯಾಲಯ ಅನುಮತಿಸುವುದಿಲ್ಲ. ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಒಂದು ವೇಳೆ ಇದು ಪುನರಾವರ್ತನೆಯಾದರೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದೆ.
ಮಹಾರಾಷ್ಟ್ರದ ಆಕೋಲ ಜಿಲ್ಲೆಯಲ್ಲಿ ಭಾರತ್ ಜೋಡೊ ಕಾರ್ಯಕ್ರಮದ ವೇಳೆ ರಾಹುಲ್ ಗಾಂಧಿ ಅವರು ವೀರ ಸಾವರ್ಕರ್ ಕುರಿತು ಬ್ರಿಟಿಷ್ ಸರ್ಕಾರದಿಂದ ಪಿಂಚಣಿ ಪಡೆದ ಆಂಗ್ಲರ ಸೇವಕ ಎಂದು ಟೀಕೆ ಮಾಡಿದ್ದರು. ಹೀಗಾಗಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು.
ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ವಿಭಾಗೀಯ ಪೀಠ ರಾಹುಲ್ ಗಾಂಧಿ ಹೇಳಿಕೆಗೆ ಛೀಮಾರಿ ಹಾಕಿತು.
ವಸಾಹತುಶಾಹಿ ಸರ್ಕಾರದಿಂದ ಪಿಂಚಣಿ ಪಡೆದ ಬ್ರಿಟಿಷ್ ಸೇವಕ ಎಂದು ಹೇಳಿದ್ದೀರಿ. ಸ್ವಾತಂತ್ರ್ಯ ಹೋರಾಟಗಾರರನ್ನು ಹೀಗೆ ಅವಮಾನಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿತು. ನೀವು ಸಂಸದರು ಮೇಲಾಗಿ ಲೋಕಸಭೆಯ ಪ್ರತಿಪಕ್ಷದ ನಾಯಕರು. ರಾಜಕೀಯ ನಾಯಕರಾಗಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಈ ರೀತಿ ವಿವಾದಾತ್ಮಕ ಪದಗಳನ್ನು ಏಕೆ ಬಳಸುತ್ತೀರಿ. ಪ್ರಚೋದಿಸುವ ಉದ್ದೇಶ ಇಲ್ಲದಿದ್ದರೆ ಅಂಥ ಹೇಳಿಕೆಗಳನ್ನು ಏಕೆ ನೀಡುತ್ತಿದ್ದೀರಿ ಎಂದು ನ್ಯಾಯಮೂರ್ತಿಗಳು ಪ್ರಶ್ನೆಗಳ ಸುರಿಮಳೆಗೈದರು.
ಮಹಾತ್ಮ ಗಾಂಧಿ ಅವರೇ ವೀರಸಾವರ್ಕರ್ ಅವರನ್ನು ನಿಷ್ಠಾವಂತ ಸೇವಕ ಎಂದು ಬಳಸಿರುವುದು ನಿಮ್ಮ ಕಕ್ಷಿದಾರರಿಗೆ ಗೊತ್ತಿದೆಯೇ? ನಿಮ್ಮ ಅಜ್ಜಿ ಕೂಡ ಇವರಿಗೆ ಪತ್ರವನ್ನು ಬರೆದಿದ್ದಾರೆ ಎಂಬುದನ್ನು ಮರೆತುಬಿಟ್ಟಿದ್ದೀರಿ? ಮುಂದೆ ಇಂಥ ಹೇಳಿಕೆಗಳನ್ನು ಕೊಡಬೇಡಿ ಎಂದು ನಿಮ್ಮ ಕಕ್ಷಿದಾರರಿಗೆ ಹೇಳಬೇಕು ಎಂದು ರಾಹುಲ್ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿತು.
ಸದ್ಯ ವಿಚಾರಣೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ. ನೀವು ಪದೇ ಪದೇ ಇದೇ ರೀತಿ ಹೇಳಿಕೆಗಳನ್ನು ಕೊಡುವುದಾದರೆ ಸ್ವಯಂಪ್ರೇರಿತ ದೂರು ದಾಖಲು ಮಾಡುತ್ತೇವೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಟೀಕೆ ಮಾಡಲು ನಾವು ಯಾರಿಗೂ ಅವಕಾಶ ಕೊಡುವುದಿಲ್ಲ. ಎಚ್ಚರ ಇಟ್ಟುಕೊಂಡು ಮಾತನಾಡಿ ಎಂದು ರಾಹುಲ್ ಗಾಂಧಿ ಅವರಿಗೆ ಸೂಚಿಸಿದೆ.
ಇತಿಹಾಸ ಗೊತ್ತಿಲ್ಲದವರು ತಿಳಿದುಕೊಂಡು ಮಾತನಾಡಬೇಕು. ನಮಗೆ ವಾಕ್ ಸ್ವಾತಂತ್ರವಿದೆ ಎಂದು ಬಾಯಿಗೆ ಬಂದಂತೆ ಮಾತನಾಡಬಾರದು, ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಜವಾಬ್ದಾರಿ ಅರಿತು ಮಾತನಾಡಿದರೆ ನಿಮ್ಮ ಸ್ಥಾನಕ್ಕೂ ಗೌರವ ಇರುತ್ತದೆ ಎಂದು ನ್ಯಾಯಾಲಯ ಛಾಟಿ ಬೀಸಿತು.
ನೀವು ಒಂದು ಬಾರಿ ವೀರ ಸಾವರ್ಕರ್ ಬ್ರಿಟಿಷರ ಪಿಂಚಣಿ ಸೇವಕ ಎಂದು ಹೇಳುತ್ತೀರಿ. ಮುಂದಿನ ಬಾರಿ ಮಹತ್ಮಾ ಗಾಂಧಿಯನ್ನು ಬ್ರಿಟಿಷರ ಸೇವಕ ಎಂದು ಹೇಳಿದರೆ ನಾವು ಒಪ್ಪಬೇಕೇ? ಒಬ್ಬರ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತ ಇಟ್ಟುಕೊಂಡು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಗೊತ್ತಿಲ್ಲ ಎಂದರೆ ಸುಮ್ಮನಿದ್ದು ಬಿಡಿ. ಸುಖಾಸುಮ್ಮನೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳಬೇಡಿ.
ಇತಿಹಾಸ ಮತ್ತು ಭೂಗೋಳವನ್ನು ತಿಳಿಯದೆ ಮಾತನಾಡಿದರೆ ಅದು ಅಭಾಸವಾಗುತ್ತದೆ. ರಾಜಕೀಯಕ್ಕಾಗಿ ನೀವು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಈ ರೀತಿ ಮಾತನಾಡುತ್ತಿದ್ದೀರಿ ಎಂದರೆ ನ್ಯಾಯಾಲಯ ಸುಮ್ಮನಿರಬೇಕೆ? ಎಂದು ನ್ಯಾಯಾಲಯ ಪ್ರಶ್ನೆ ಮಾಡಿದೆ. ನಿಮ್ಮ ಕಕ್ಷಿದಾರರ ಹೇಳಿಕೆ ಅತ್ಯಂತ ಬೇಜಾವಾಬ್ದಾರಿಯಿಂದ ಕೂಡಿದೆ. ವೀರ್ ಸಾವರ್ಕರ್ ಅವರನ್ನು ಹೊಗಳಿ ಅವರ ಆಜ್ಜಿಯೇ ಪ್ರಶಂಸನಾ ಪತ್ರ ಬರೆದಿದ್ದಾರೆ.
ಅವರ ದೃಷ್ಟಿಯಲ್ಲಿ ಒಳ್ಳೆಯವರಾದ ಸಾರ್ವಕರ್ ಇವರಿಗೆ ಹೇಗೆ ಬ್ರಿಟಿಷ್ ಸೇವಕರಾಗಿದ್ದರು? ಮಹಾರಾಷ್ಟ್ರದಲ್ಲಿ ಈಗಲೂ ಅವರನ್ನು ಪೂಜಿಸುತ್ತಾರೆ. ಇದು ಅವರವರ ನಂಬಿಕೆ. ಮುಂದೆ ಈ ರೀತಿ ಹೇಳಿಕೆಗಳನ್ನು ಕೊಡಬೇಡಿ ಎಂದು ರಾಹುಲ್ ಗಾಂಧಿ ಪರ ವಕೀಲರಾದ ಅಭಿಷೇಕ್ ಮನುಸಿಂಗ್ನಿಗೆ ನ್ಯಾಯಾಧೀಶರು ಸೂಚನೆ ಕೊಟ್ಟರು.