ಬೆಂಗಳೂರು, ಆ.20- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಅಭಿವೃದ್ಧಿಗಾಗಿ ಎಸ್‌ಸಿ, ಎಸ್‌ಟಿ ಉಪಯೋಜನೆಯಡಿ ಒದಗಿಸಲಾ ಗಿರುವ ಅನುದಾನದ ದುರ್ಬಳಕೆಯ ವಿಚಾರವಾಗಿ ವಿಧಾನಸಭೆಯಲ್ಲಿಂದು ಸುದೀರ್ಘ ಚರ್ಚೆ ನಡೆದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕೋಲಾಹಲದ ವಾತಾವರಣ ನಿರ್ಮಾಣವಾಗಿತ್ತು.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಶಾಸಕ ಎಂ.ಚಂದ್ರಪ್ಪ ಪ್ರಶ್ನೆ ಕೇಳಿ, ಸಮಾಜ ಕಲ್ಯಾಣ ಇಲಾಖೆಗೆ 2025-26ನೇ ಸಾಲಿನಲ್ಲಿ 7 ಸಾವಿರ ಕೋಟಿ ರೂ.ಗಳನ್ನು ಮಾತ್ರ ನೀಡಲಾಗಿದೆ. ಆಗಿದ್ದರೂ 42,017.51 ಕೋಟಿ ರೂ.ಗಳನ್ನು ನೀಡಿದ್ದೇವೆ ಎಂದು ಸರ್ಕಾರ ಡಂಗೂರ ಹೊಡೆ ಯುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ ಪರಿಶಿಷ್ಟರಿಗೆ ಸರ್ಕಾರ ಇನ್ನು ಎಷ್ಟು ವರ್ಷ ನೆರವು ನೀಡಬೇಕು ಎಂಬ ಪ್ರಶ್ನೆಯನ್ನು ಸಾಮಾನ್ಯ ವರ್ಗದ ಜನ ಕೇಳುತ್ತಿದ್ದಾರೆ. ಸರ್ಕಾರ ನೀಡುವುದು 7 ಸಾವಿರ ಕೋಟಿ ರೂ. ಮಾತ್ರ, 42 ಸಾವಿರ ಕೋಟಿ ರೂ.ಗಳನ್ನು ಬೇರೆ ಬೇರೆ ಇಲಾಖೆಗೆ ಹಂಚಿಕೆ ಮಾಡಲಾಗುತ್ತದೆ. ಅಷ್ಟು ಹಣವನ್ನು ಒಂದೇ ವೇದಿಕೆಗೆ ತಂದು ಸಮಾಜ ಕಲ್ಯಾಣ ಇಲಾಖೆಯಿಂದಲೇ ಖರ್ಚು ಮಾಡುವ ವ್ಯವಸ್ಥೆ ನಿರ್ಮಿಸಿ, ಆಗ ನೈಜ್ಯವಾದ ಅಭಿವೃದ್ಧಿ ಸಾಧ್ಯವಾಗಬಹುದು ಎಂದರು. ಉತ್ತರ ನೀಡಿದ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಸ್‌ಸಿ ಎಸ್‌ಪಿ/ ಟಿಎಸ್‌ಪಿ ಅಡಿ 42,017.51 ಕೋಟಿ ರೂ.ಗಳ ಅನುದಾನ ಹಂಚಿಕೆಯಾಗಿದೆ. 2025ರ ಅಂತ್ಯಕ್ಕೆ 8459.59 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಬೆಳಗಾವಿಯ ಅಧಿವೇಶನದಲ್ಲಿ ರೂಪಿಸಲಾದ ಎಸ್‌ಸಿ ಎಸ್‌ಪಿ/ ಟಿ ಎಸ್ ಪಿ ಕಾಯ್ದೆಯ ಅಡಿ ಶೇಕಡಾ ಜನಸಂಖ್ಯೆ ಜನಗನುಗುಣವಾಗಿ ರಾಜ್ಯದ ಬಜೆಟ್ಟಿನ ಯೋಜನಾ ವೆಚ್ಚಕ್ಕೆ ಅನುಗುಣವಾಗಿ ಶೇ.24 ರಷ್ಟು ಹಣವನ್ನು ವಿಶೇಷವಾಗಿ ಮೀಸಲಿಡಲಾಗುತ್ತಿದೆ. ಸಮುದಾಯದ ಯೋಜನೆಗಳನ್ನು ರೂಪಿಸುವಾಗ ಉಪಯೋಜನೆ ನಿಯಮ 7(ಸಿ) ಅಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳ ಜನಸಂಖ್ಯೆ ಅನುಗುಣವಾಗಿ ಹಣ ಬಳಕೆ ಮಾಡಲು ಅವಕಾಶ ಇದೆ ಎಂದರು.
ಅದರ ಅನುಸಾರ 2025-26 ಸಾಲಿನಲ್ಲಿ ಗೃಹಲಕ್ಷಿ ಯೋಜನೆಗೆ 7,438.08 ಕೋಟಿ ರೂ. ಅನ್ನಭಾಗ್ಯ ಯೋಜನೆಯಡಿ 1,670.76, ಕೋಟಿ ಗೃಹಜೋತಿಗೆ 2626, ಶಕ್ತಿ ಯೋಜನೆಗೆ 1,537 ಕೋಟಿ ರೂ. ಯುವ ನಿಧಿಗೆ 162 ಕೋಟಿ ಸೇರಿ 13,433.84 ಕೋಟಿ ರೂ. ಬಳಕೆ ಮಾಡಲಾಗಿದೆ ಎಂದರು.
ವಿಶೇಷ ಉಪಯೋಜನೆ ಕಾಯ್ದೆ ಜಾರಿಗೂ ಮುನ್ನ ಜಾತಿಯಲ್ಲಿದ್ದ ಕಾನೂನುಗಳಲ್ಲಿ ವಿವಿಧ ಇಲಾಖೆಗಳು ತಮ ಪಾಡಿಗೆ ತಾವು ಅನುದಾನ ನಿಗದಿ ಮಾಡಿಕೊಂಡು ಖರ್ಚು ಮಾಡುತ್ತಿದ್ದವು. ಈಗಲೂ ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿ ಅನೇಕ ರಾಜ್ಯಗಳಲ್ಲಿ ಈ ವ್ಯವಸ್ಥೆ ಇದೆ. ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಮಾತ್ರ ವಿಶೇಷ ಕಾಯ್ದೆ ರೂಪಿಸಲಾಗಿದೆ ಎಂದು ವಿವರಿಸಿದರು.
ಒಟ್ಟು ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಯಿಂದಲೇ ಹಂಚಿಕೆ ಮಾಡಬೇಕು ಎಂದು ಶಾಸಕರು ನೀಡಿರುವ ಸಲಹೆ ಉತ್ತಮವಾಗಿದೆ. ಆದರೆ ಆಯಾ ಇಲಾಖೆಗಳಲ್ಲೂ ಕೆಲಸ ಕಾರ್ಯಗಳು ನಡೆಯಬೇಕು ಹೀಗಾಗಿ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿರುವ ಹಣಕಾಸು ಸೌಲಭ್ಯಗಳು ಮುಂದುವರಿಯಲಿವೆ ಎಂದರು.
ಪರಿಶಿಷ್ಟರ ಅಭಿವೃದ್ಧಿಗೆ ಪರಿಣಾಮಕಾರಿ ಹಣ ಬಳಕೆಗಾಗಿ ಪುಲ್ ಫಂಡ್ ಅಥವಾ ಏಕ ಗವಾಕ್ಷಿ ವ್ಯಸ್ಥೆಯನ್ನು ಜಾರಿಗೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ವಿಧಾನ ಮಂಡಲದ ಎಸ್‌ಸಿ, ಎಸ್‌ಟಿ ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ ಮತ್ತಷ್ಟು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಬಿಜೆಪಿಯ ಸುನಿಲ್ ಕುಮಾರ್, ಗ್ಯಾರಂಟಿ ಯೋಜನೆಗಳಿಗೆ 13 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿರುವುದಾಗಿ ಸಚಿವರು ಲಿಖಿತ ಮಾಹಿತಿ ನೀಡಿದ್ದಾರೆ. ಶಕ್ತಿ ಯೋಜನೆಗೆ 1500 ಕೋಟಿ ರೂ. ಬಳಕೆಯಾಗಿದೆ. ಪ್ರಯಾಣಿಕರಲ್ಲಿ ಎಸ್ಸಿ, ಎಸ್ಟಿಗಳನ್ನು ಹೇಗೆ ಗುರುತಿಸುತ್ತೀರಾ ಎಂದು ಪ್ರಶ್ನಿಸಿದರರು.
ಪರಿಶಿಷ್ಟರ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿ, ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದಾಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದಗಳಾದವು.
ಶಾಸಕ ಚಂದ್ರಪ್ಪ, ಸಮಾಜ ಕಲ್ಯಾಣ ಸಚಿವರಿಂದ ಈ ಉತ್ತರವನ್ನು ನಾವು ನಿರೀಕ್ಷಿಸಿರಲಿಲ್ಲ. ಸಾರಿಗೆ ಇಲಾಖೆಗೆ ಎಸ್‌ಸಿ, ಎಸ್‌ಟಿ ಉಪಯೋಜನೆಯಡಿ 1500 ಕೋಟಿ ರೂ.ಗಳನ್ನು ನೀಡಲಾಗಿದೆ. ಈಗ ಶಕ್ತಿ ಯೋಜನೆಗೆ 1350 ಕೋಟಿ ರೂ.ಗಳನ್ನು ಒದಗಿಸಿದ್ದಾರೆ.
ಹಾಗಿದ್ದರೆ ಸಾರಿಗೆ ಇಲಾಖೆಗೆ ನೀಡಿರುವ ಹಣ ಯಾವುದಕ್ಕೆ ಬಳಕೆಯಾಗುತ್ತದೆ ಎಂದು ಪ್ರಶ್ನಿಸಿದರು.ಹಿಂದಿನ ಬಿಜೆಪಿ ಸರ್ಕಾರ ಶೇ. 40ರಷ್ಟು ಕಮಿಷನ್ ಪಡೆಯುತ್ತಿತ್ತು. ಅದನ್ನು ಉಳಿಸಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಈಗ ಪರಿಶಿಷ್ಟ ಜಾತಿಗಳ ಪರಿಶಿಷ್ಟ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಎಸ್‌ಎಸಿ, ಎಸ್‌ಟಿ ಸಮುದಾಯಕ್ಕೆ 42 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ ಎಂದು ಯಾವ ಪುರುಷಾರ್ಥಕ್ಕೆ ಹೇಳಿಕೊಳ್ಳುತ್ತೀರಾ ಎಂದು ಕಿಡಿಕಾರಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪ್ರತಿ ವರ್ಷವೂ ರಾಜ್ಯ ಸರ್ಕಾರ ಪರಿಶಿಷ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿದ್ದರೆ ಬೇರೆ ಸರ್ಕಾರಗಳು ಈ ರೀತಿ ಹಣ ದುರ್ಬಳಕೆ ಮಾಡಿಕೊಂಡಿದ್ದರೆ, ಮಹದೇವಪ್ಪ ಸಹಿಸಿಕೊಳ್ಳುತ್ತಿದ್ದರೆ ಎಂದು ಪ್ರಶ್ನಿಸಿದರು.
ಪ್ರವಾಸ ಮಂದಿರಗಳ ನಿರ್ಮಾಣಕ್ಕೆ, ಹುಲಿಗಳ ಪಾಲನೆಗೆ ಪರಿಶಿಷ್ಟರ ಹಣ ಬಳಕೆಯಾಗಿದೆ. ಹುಲಿಗಳಲ್ಲೂ ಪರಿಶಿಷ್ಟರು, ಲಿಂಗಾಯಿತರು, ಒಕ್ಕಲಿಗರು ಎಂಬ ಜಾತಿಗಳಿವೆಯೇ ಎಂದು ಪ್ರಶ್ನಿಸಿದರು.
ಬಿಜೆಪಿಯ ಸುರೇಶ್ ಕುಮಾರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ಜೆಡಿಎಸ್ ಶಾಸಕ ನೇಮಿ ರಾಜ ನಾಯಕ್ ಸೇರಿದಂತೆ ಹಲವಾರು ಮಂದಿ ಪರಿಶಿಷ್ಟ ಹಣವನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆಕೋಶ ವ್ಯಕ್ತಪಡಿಸಿ, ಮಹದೇವಪ್ಪ ಆತ ಸಾಕ್ಷಿಗನುಗುಣವಾಗಿ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಉತ್ತರ ನೀಡಿದ ಸಚಿವ ಮಹದೇವಪ್ಪ, ಉಪಯೋಜನೆ ನಿಯಮ ರೂಪಿಸುವಾಗ ವಿಧಾನ ಮಂಡಲದಲ್ಲಿ ಚರ್ಚೆಯಾಗಿ ಸರ್ವಾನುಮತದ ಅಂಗೀಕಾರವಾಗಿದೆ. ಸೆಕ್ಷನ್ 7 ಸಿ ಅಡಿ ಸಮುದಾಯದ ಕಾರ್ಯಕ್ರಮಗಳನ್ನು ರೂಪಿಸುವಾಗ ಪರಿಶಿಷ್ಟ ಜನಸಂಖ್ಯೆ ಅನುಗುಣವಾಗಿ ಹಣ ಬಳಕೆ ಮಾಡಲು ಅವಕಾಶವಿದೆ. ಅದರಂತೆ ಪಂಚಖಾತ್ರಿ ಯೋಜನೆಗಳಿಗೆ ಹಣ ಬಳಕೆ ಮಾಡಿದ್ದೇವೆ. ಎಲ್ಲಾ ಯೋಜನೆಗಳಲ್ಲೂ ಎಸ್ಸಿ, ಎಸ್ಟಿ ಫಲಾನುಭವಿಗಳ ಪಟ್ಟಿ ನೀಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಪಟ್ಟಿ ನೀಡದೆ ಇದ್ದರೆ ಉಪಯೋಜನೆಯ ಹಣ ವಾಪಸ್ ಪಡೆಯಲಾಗುವುದು ಎಂದು ಹೇಳಿದರು.
ಸುನೀಲ್ ಕುಮಾರ್, ಶಕ್ತಿ ಯೋಜನೆಯಲ್ಲಿ ಎಸ್ಸಿ, ಎಸ್ಟಿ ಪ್ರಯಾಣಿಕರನ್ನು ಹೇಗೆ ಗುರುತಿಸಲಾಗುತ್ತದೆ. ಒಂದು ವೇಳೆ ಫಲಾನುಭವಿಗಳ ಪಟ್ಟಿ ನೀಡದಿದ್ದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆಯೇ ಎಂದು ಸವಾಲು ಹಾಕಿದರು. ಅರಗ ಜ್ಞಾನೇಂದ್ರ, ಪ್ರತಿ ಬಾರಿಯೂ ಮಹದೇವಪ್ಪ ಸಂವಿಧಾನ ಮತ್ತು ಅಂಬೇಡ್ಕರ್ ಎಂದು ಪ್ರತಿಪಾದಿಸುತ್ತಾರೆ. ದಲಿತರ ಹಣವನ್ನು ದುರ್ಬಳಕೆಯಾಗುತ್ತಿದ್ದರೂ ಹೇಗೆ ಸಹಿಸಿಕೊಂಡಿದ್ದಾರೆ ಎದು ಪ್ರಶ್ನಿಸಿದರು.ಈ ವಿಚಾರ ಸುದೀರ್ಘ ಚರ್ಚೆಗೆ ಗ್ರಾಸವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಆರೋಪ ಮತ್ತು ಆರೋಪಗಳಿಗೂ ಕಾರಣವಾಯಿತು.