ಬೆಂಗಳೂರು, ಸೆ.9; ಸುಪ್ರೀಂ ಕೋರ್ಟ್ ತೀರ್ಪಿನಂತೆ ಪರಿಷ್ಟರ ಮೀಸಲಾತಿಯಲ್ಲಿ, ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯಾಧ್ಯಂತ ಭಾರಿ ಪ್ರತಿಭಟನೆ ನಡೆಸಲಾಯಿತು ಇದಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ 5 ಲಕ್ಷಕ್ಕೂ ಹೆಚ್ಚು ಪ್ರತಿಭಟನಾಕಾರರಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯದ್ಯಕ್ಷ ಎನ್ ಮೂರ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಮಾಡಲು ಒತ್ತಾಯಿಸಿ ರಾಜ್ಯಾಧ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ಬೃಹತ್ ಪ್ರತಿಭಟನಾ ಮೆಟವಣಿಗೆಗೆ ಮತ್ತು “ತಮಟೆ ಚಳುವಳಿ” ಮಾಡಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮೀಸಲಾತಿಯ ಸೌಲಭ್ಯಗಳು ಪರಿಶಿಷ್ಟ ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ, ಪರಿಶಿಷ್ಟ ಜಾತಿಗಳಲ್ಲಿ ಅಸ್ಪೃಶ್ಯತೆ ಕೆಳ ಸಮುದಾಯಗಳಾದ ಇತರೇ ಉಪಜಾತಿಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಈ ಸಮುದಾಯಗಳು ಸಹಸ್ರಾರು ವರ್ಷಗಳಿಂದ ತೀರ ಹಿಂದುಳಿದಿದ್ದು, ಅಸ್ಪೃಶ್ಯತೆ, ನಿರುದ್ಯೋಗ, ಬಡತನದ ಬೇಗೆಯಲ್ಲಿ ಬೆಂದು ಬಸವಳಿದಿದ್ದಾರೆ. ಸಂವಿಧಾನದ ಆಶಯದ ಸಾಮಾಜಿಕ ನ್ಯಾಯದಿಂದ ವಂಚಿತವಾಗಿದೆ ಎಂದರು.
ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಮಾಡಲು ರಾಜ್ಯಸರ್ಕಾರಗಳಿಗೆ ಸಂವಿಧಾನ ಬದ್ಧ ಅಧಿಕಾರವಿದೆ ಎಂದು ತೀರ್ಪು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತೀರ್ಪು ಬಂದು 40 ದಿನಗಳಾದರು ಸಹ ಕೋರ್ಟ್ ಆದೇಶಗಳನ್ನು ಜಾರಿ ಮಾಡಿಲ್ಲ. ರಾಜ್ಯ ಸರ್ಕಾರ “ತಟಸ್ಥ ನಿಲುವು” ತಾಳಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು.
ಕೇಂದ್ರಸರ್ಕಾರ ಪರಿಶಿಷ್ಟ ಜಾತಿಗಳಿಗೆ ಕೆನೆಪದರ ಮೀಸಲಾತಿ ಅಳವಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದಕ್ಕೆ ನಾವು ಆಸ್ಪದ ಕೊಡುವುದಿಲ್ಲ. ಕರ್ನಾಟಕ ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿದು ಮೀನಾಮೇಷ ಎಣಿಸದೆ ಯಾವುದೆ ವಿಳಂಬ ನೀತಿ ಅನುಸರಿಸದೆ, ಈ ಕೂಡಲೆ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಅನುಷ್ಠಾನಗೊಳಿಸಲು ದ.ಸಂ.ಸ ಆಗ್ರಹಿಸಿದೆ.
ಮತ್ತಷ್ಟು ವಿಳಂಬ ಮಾಡಿದ್ದಲ್ಲಿ ಅಕ್ಟೋಬರ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ 5 ಲಕ್ಷ ಜನ ಸೇರಿಸಿ “ವಿಧಾನಸೌಧಕ್ಕೆ” ಮುತ್ತಿಗೆ ಹಾಕಲಾಗುವುದು. ಹಾಗೂ ರಾಜ್ಯಾಧ್ಯಂತ ಇಂದಿನಿಂದಲೇ ಜನಾಂದೋಲನ ಕಾರ್ಯಕ್ರಮ ನಡೆಸಲಾಗುವುದು ಎಂದರು