ಬೆಂಗಳೂರು,ಜ.18- ಪರಿಶಿಷ್ಟ ಜಾತಿಯ ಒಳಪಂಗಡಗಳ ಮೀಸಲಾತಿಗೆ ಸಂವಿಧಾನಾತ್ಮಕ ಮಾನ್ಯತೆ ದೊರೆಯುವಂತೆ ಪರಿಚ್ಛೇದ 341 ಕ್ಕೆ ಹೊಸದಾಗಿ ಉಪಖಂಡ 3 ನ್ನು ಸೇರ್ಪಡೆಗೊಳಿಸಲು ಸಂವಿಧಾನ ತಿದ್ದುಪಡಿ ತರುವಂತೆ ರಾಜ್ಯ ಸಚಿವ ಸಂಪುಟ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಕುರಿತಂತೆ ವಿಚಾರವನ್ನು ಪ್ರಮುಖವಾಗಿ ಚರ್ಚಿಸಲಾಗಿದೆ. ಇದಕ್ಕೂ ಮುನ್ನ ಬೆಳಿಗ್ಗೆಯಿಂದಲೂ ಪರಿಶಿಷ್ಟ ಸಮುದಾಯದ ಸಚಿವರು, ಪ್ರಮುಖ ನಾಯಕರು, ಸಂಸದರು ಸರಣಿ ಸಭೆಗಳನ್ನು ನಡೆಸಿದರು. ಬೆಳಿಗ್ಗೆ ಸಚಿವ ಎಚ್.ಸಿ.ಮಹದೇವಪ್ಪನವರ ಮನೆಯಲ್ಲಿ ಸಭೆ ನಡೆಯಿತು. ಬಳಿಕ ವಿಧಾನಸೌಧದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರ ಕಚೇರಿಯಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ ಸಚಿವರು ಸಭೆ ನಡೆಸಿ ಚರ್ಚಿಸಿದರು.
ಆಹಾರ ಮತ್ತು ಪೂರೈಕೆ ನಾಗರಿಕ ಸಚಿವರಾದ ಕೆ.ಎಚ್.ಮುನಿಯಪ್ಪ, ರಾಜ್ಯಸಭಾ ಸದಸ್ಯರಾದ ಎಲ್.ಹನುಮಂತಯ್ಯ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಸುಧಾಮ್ ದಾಸ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಧಾನಿಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುವುದು ಉದ್ಧಟತನ : ಹೆಚ್‌ಡಿಕೆ
ಒಳಮೀಸಲಾತಿಯ ವಿಮರ್ಶೆ :
ಪರಿಶಿಷ್ಟ ಜಾತಿಯಲ್ಲಿ ಇರುವ 101 ಜಾತಿಗಳಿಂದ 2011ರ ಜನಗಣತಿಯಂತೆ 1.05 ಕೋಟಿಯಷ್ಟು ಜನಸಂಖ್ಯೆ ಇದೆ. ಇದು ಒಟ್ಟು ಜನಸಂಖ್ಯೆಯಲ್ಲಿ ಶೇ.17.15 ರಷ್ಟು ಎಂದು ಅಂದಾಜಿಸಲಾಗಿದೆ. ಈ ಹಿಂದೆ ಬಸವರಾಜು ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ 2022 ಡಿಸೆಂಬರ್ 13 ರಂದು ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣಕ್ಕೆ ಕಾನೂನು ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಿದ್ದರು. ಒಳಮೀಸಲಾತಿ ಅಧ್ಯಯನ ನಡೆಸಿದ್ದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಉಪಸಮಿತಿ ಅಪ್ರಸ್ತುತ ಎಂದು ತಿರಸ್ಕರಿಸಿತ್ತು. ಮುಂದುವರೆದು ಮೀಸಲಾತಿ ಪ್ರಮಾಣವನ್ನು ಶೇ. 15 ರಿಂದ 17 ಕ್ಕೆ ಹೆಚ್ಚಿಸಿತ್ತು.
ಸದಾಶಿವ ಆಯೋಗದ ಶಿಫಾರಸ್ಸಿನಲ್ಲಿನ ಮೀಸಲಾತಿ ವರ್ಗೀಕರಣದ ಪ್ರಮಾಣವನ್ನು ಪರಿಗಣಿಸಿ, ಪರಿಶಿಷ್ಟ ಜಾತಿಗಳನ್ನು 4 ಗುಂಪುಗಳಾಗಿ ವಿಂಗಡಿಸಿ ಒಳಮೀಸಲಾತಿಯನ್ನು ನಿಗದಿ ಮಾಡಲಾಗಿತ್ತು. ಅದಕ್ಕೆ 2023 ರ ಮಾರ್ಚ್ 24 ರ ಸಂಪುಟ ಸಭೆ ಅಂಗೀಕಾರ ನೀಡಿದೆ. ಸ್ಪರ್ಶ ಜಾತಿಗಳಾದ ಬೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಎಸ್ಸಿ ಮೀಸಲಾತಿ ಪಟ್ಟಿಯಲ್ಲಿ ಮುಂದುವರೆಸುವುದಾಗಿ ನಿರ್ಣಯಿಸಲಾಗಿತ್ತು. ಸಂಪುಟದ ನಿರ್ಣಯವನ್ನು ಅದೇ ವರ್ಷ ಮಾರ್ಚ್ 28 ಮತ್ತು 31 ರಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು.
ಜೂನ್ 8 ರಂದು ರಾಜ್ಯಕ್ಕೆ ಪತ್ರ ಬರೆದಿದ್ದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಪಂಜಾಬ್ ಸರ್ಕಾರ ಮತ್ತು ದೇವೇಂದ್ರ ಸಿಂಗ್ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿರುವ 2020 , ಆಗಸ್ಟ್ 27 ರ ತೀರ್ಪಿನಂತೆ ಒಳಮೀಸಲಾತಿ ವರ್ಗೀಕರಣ ನ್ಯಾಯಾಂಗ ನಿಂದನೆಯಾಗಲಿದೆ ಎಂದು ತಿಳಿಸಿದೆ. ಈ ಮೊದಲು ಆಂಧ್ರಪ್ರದೇಶ ಸರ್ಕಾರ, ಪಂಜಾಬ್ ಸರ್ಕಾರಗಳು ರೂಪಿಸಿದ್ದ ಒಳಮೀಸಲಾತಿಯನ್ನು ನ್ಯಾಯಾಲಯಗಳು ಅಸಿಂಧುಗೊಳಿಸಿವೆ ಎಂದು ತಿಳಿಸಲಾಗಿದೆ.
ಕೇಂದ್ರ ಸರ್ಕಾರ ಒಳಮೀಸಲಾತಿಯ ಕುರಿತು ಅಧ್ಯಯನ ನಡೆಸಿ ವರದಿ ನೀಡಲು 2011 ಜುಲೈ 20 ರಂದು ದೆಹಲಿ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾೀಶರಾದ ತುಷಾ ಮೆಹ್ರಾ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಆಯೋಗ ರಚಿಸಿತ್ತು. ಆಯೋಗವು ಸಂವಿಧಾನದ 341 ರ ಅನುಚ್ಛೇದಕ್ಕೆ ಉಪಬಂಧ 3 ನ್ನು ಸೇರ್ಪಡೆ ಮಾಡಿದರೆ ಒಳಮೀಸಲಾತಿ ನೀಡಲು ಅವಕಾಶವಾಗಲಿದೆ ಎಂದು ತಿಳಿಸಿದೆ.
ಸಂವಿಧಾನದ ತಿದ್ದುಪಡಿಯಾದರೆ ಆರ್ಥಿಕ ಪರಿಣಾಮಗಳು ಇಲಾಖೆಗಳ ಸಮಾಲೋಚನೆ, ಇತರ ಅಭಿಪ್ರಾಯಗಳು ಅಗತ್ಯವಿಲ್ಲದೆ ರಾಜ್ಯಸರ್ಕಾರವೇ ಒಳಮೀಸಲಾತಿಯನ್ನು ಜಾರಿಗೆ ತರಬಹುದಾಗಿದೆ ಎಂದು ತಿಳಿಸಲಾಗಿದೆ.ಈ ನಿಟ್ಟಿನಲ್ಲಿ ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಸಂವಿಧಾನದ 341 ಪರಿಚ್ಛೇದ 3 ರ ಸೇರ್ಪಡೆಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಂಪುಟ ಸಭೆ ನಿರ್ಣಯಿಸಿದೆ.ಈ ಮೂಲಕ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದತ್ತ ಹೊಣೆಗಾರಿಕೆಯನ್ನು ಹೊತ್ತು ಹಾಕಿ ಕಾಂಗ್ರೆಸ್ ಕೈ ತೊಳೆದುಕೊಳ್ಳುವ ತಯಾರಿ ನಡೆಸಿದೆ.
ಸೂಕ್ತ ಸರ್ಕಾರಿ ನಿವಾಸಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್.ಅಶೋಕ್
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅಷ್ಟೇ ಅಲ್ಲದೆ, ಚಿತ್ರದುರ್ಗ ಸಮಾವೇಶದಲ್ಲೂ ಘೋಷಣೆ ಮಾಡಲಾಗಿತ್ತು.ಆದರೆ ಪ್ರಸ್ತುತ ಒಳಮೀಸಲಾತಿಯನ್ನು ಜಾರಿಗೊಳಿಸಿದರೆ ಅದು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಿಸಬಹುದು ಎಂಬ ಆತಂಕದಿಂದ ಕೇಂದ್ರದತ್ತ ಬೆರಳು ಮಾಡಲು ರಾಜ್ಯಸರ್ಕಾರ ಮುಂದಾಗಿದೆ ಎಂಬ ಆರೋಪಗಳಿವೆ.