Wednesday, April 2, 2025
Homeಜಿಲ್ಲಾ ಸುದ್ದಿಗಳು | District Newsಕೋಲಾರ | Kolarಕೋಲಾರ : ಮನೆಗೆ ನುಗ್ಗಿ ಶಿಕ್ಷಕಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ

ಕೋಲಾರ : ಮನೆಗೆ ನುಗ್ಗಿ ಶಿಕ್ಷಕಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ

ಕೋಲಾರ, ಆ.15– ಟಿವಿ ವೀಕ್ಷಿಸುತ್ತಾ ಶಿಕ್ಷಕಿ ಕುಳಿತಿದ್ದಾಗ ಏಕಾಏಕಿ ಮನೆಯೊಳಗೆ ನುಗ್ಗಿದ ಮೂವರು ಹಂತಕರು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಮುಳಬಾಗಿಲು ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮುಳಬಾಗಿಲು ತಾಲೂಕಿನ ಮುಡಿಯನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಿವ್ಯಶ್ರೀ(46) ಕೊಲೆಯಾದ ಶಿಕ್ಷಕಿ.

ಮುಳಬಾಗಿಲು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ದಿವ್ಯಶ್ರೀ ಅವರು ಮಗಳೊಂದಿಗೆ ವಾಸವಾಗಿದ್ದು, ಇವರ ಪತಿ ಪದನಾಭಶೆಟ್ಟಿ ಊದುಬತ್ತಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದರಿಂದ ಹೊರಗೆ ಹೋಗಿದ್ದರು.ಇವರ ಮತ್ತೊಬ್ಬ ಮಗ ಪ್ರೇಮ್‌ ವಿದ್ಯಾಭ್ಯಾಸದ ನಿಮಿತ್ತ ಬೇರೆ ಊರಿನಲ್ಲಿ ನೆಲೆಸಿದ್ದಾರೆ. ಹಾಗಾಗಿ ಇವರ ಮನೆಯಲ್ಲಿ ದಿವ್ಯಶ್ರೀ ಹಾಗೂ ಪುತ್ರಿ ನಿಶಾ ಮಾತ್ರ ಇದ್ದರು.

ನಿಶಾ ನಿನ್ನೆ ಸಂಜೆ ಮನೆಯ ಮೇಲ್ಬಾಗದ ಕೊಠಡಿಯಲ್ಲಿ ಓದುತ್ತಿದ್ದಳು. ನೆಲ ಮಾಳಿಗೆಯ ಮನೆಯಲ್ಲಿ ದಿವ್ಯಶ್ರೀ ಅವರು ರಾತ್ರಿ 7.30ರ ಸುಮಾರಿನಲ್ಲಿ ಟಿವಿ ವೀಕ್ಷಿಸುತ್ತ ಕುಳಿತಿದ್ದರು. ಆ ವೇಳೆ ಮೂವರು ಹಂತಕರು ಏಕಾಏಕಿ ಮನೆಯೊಳಗೆ ನುಗ್ಗಿ ಚಾಕುವಿನಿಂದ ದಿವ್ಯಶ್ರೀ ಅವರ ಕುತ್ತಿಗೆ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮನೆಯೊಳಗೆ ಏನೋ ಗಲಾಟೆ ಶಬ್ದವಾಗುತ್ತಿದೆ ಎಂದು ತಿಳಿದು ನಿಶಾ ಕೆಳಗೆ ಇಳಿದು ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಇದ್ದದ್ದು ಕಂಡು ಚೀರಾಡಿದ್ದಾರೆ. ನೆರೆಹೊರೆಯವರು ಏನಾಯಿತೆಂದು ಇವರ ಮನೆಗೆ ಬಂದು ನೋಡಿ ತಕ್ಷಣ ರಕ್ತದ ಮಡುವಿನಲ್ಲಿ ಬಿದಿದ್ದ ದಿವ್ಯಶ್ರೀ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಜನಭರಿತ ಈ ಬಡಾವಣೆಯಲ್ಲಿ ಶಿಕ್ಷಕಿಯ ಕೊಲೆ ನಡೆದಿರುವುದು ಕಂಡು ಆತಂಕಗೊಂಡ ಸುತ್ತಮುತ್ತಲ ನಿವಾಸಿಗಳು ಭಯಭೀತರಾಗಿದ್ದಾರೆ.
ಸುದ್ದಿ ತಿಳಿದು ಎಸ್‌‍ಪಿ ನಿಖಿಲ್‌, ತಹಸೀಲ್ದಾರ್‌ ವೆಂಕಟಚಲಪತಿ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ರವಿಶಂಕರ್‌, ಜಗದೀಶ್‌, ಡಿವೈಎಸ್‌‍ಪಿ ನಂದಕುಮಾರ್‌, ನಗರ ಠಾಣೆ ಇನ್‌ಸ್ಪೆಕ್ಟರ್‌ ಶಿವಕುಮಾರ್‌, ಗ್ರಾಮಾಂತರ ಠಾಣೆ ಸಿ.ಪಿ.ಐ ಸತೀಶ್‌, ಪಿಎಸ್‌‍ಐಗಳಾದ ವಿಠಲ್‌ ವೈ ತಳವಾರ್‌, ಮಮತಾ, ನಂಗ್ಲಿ ಠಾಣೆಯ ಪಿಎಸ್‌‍ಐ ಅರ್ಜುನ್‌ ಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ.

ಈ ಕೊಲೆ ಪೂರ್ವ ಯೋಜಿತವೇ ಅಥವಾ ಮನೆ ಕಳವಿಗೆ ಬಂದ ಕಳ್ಳರು ಈ ಕೃತ್ಯವೆಸಗಿದ್ದಾರೆಯೇ ಅಥವಾ ಬೇರೆ ಯಾವ ದುರುದ್ದೇಶದಿಂದ ಶಿಕ್ಷಕಿಯನ್ನು ಕೊಲೆ ಮಾಡಲಾಗಿದೆ ಎಂಬುವುದು ಪೊಲೀಸರ ತನಿಖೆಯೆಂದಷ್ಟೇ ಹೊರ ಬರಬೇಕಿದೆ.ಸ್ಥಳಕ್ಕೆ ಕೋಲಾರದಿಂದ ಬೆರಳಚ್ಚು ತಜ್ಞರು, ಎಫ್‌ಎಸ್‌‍ಎಲ್‌ ತಂಡ ಆಗಮಿಸಿ ಮಾದರಿಯನ್ನು ಸಂಗ್ರಹಿಸಿದ್ದಾರೆ.

RELATED ARTICLES

Latest News