ಅಮೇಥಿ,ಅ.4- ದುಷ್ಕರ್ಮಿಗಳ ಗುಂಪೊಂದು ಶಿಕ್ಷಕ ಕುಟುಂಬವನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಅಮೇಥಿಯಲ್ಲಿ ನಡೆದಿದೆ.ಮನೆಗೆ ನುಗ್ಗಿ ದುಷ್ಕರ್ಮಿಗಳ ತಂಡ ಶಿಕ್ಷಕ ದಂಪತಿ ಹಾಗೂ ಇಬ್ಬರು ಮಕ್ಕಳನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದೆ. ಮತರನ್ನು ಶಿಕ್ಷಕ ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ, ಅವರ ಪತ್ನಿ ಪೂನಂ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಎಂದು ಗುರುತಿಸಲಾಗಿದೆ.
ಈ ಕುಟುಂಬ ಅಹೋರ್ವ ಭವಾನಿ ಕ್ರಾಸಿಂಗ್ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸ್ಥಳದಲ್ಲಿ ದರೋಡೆ ಮಾಡಿದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಮತ್ತು ಅಪರಾಧದ ಹಿಂದಿನ ಉದ್ದೇಶವು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸುನಿಲ್ಗೆ ಸಂಬಂಧಿಸಿದ ಕಾನೂನು ವಿವಾದ ಸೇರಿದಂತೆ ಎಲ್ಲಾ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಕುಮಾರ್ ಸಿಂಗ್ ಖಚಿತಪಡಿಸಿದ್ದಾರೆ.
ಪೂನಂ ಆಗಷ್ಟ್ 18ರಂದು ಚಂದನ್ ವರ್ಮಾ ಎಂಬಾತನ ವಿರುದ್ಧ ಕಿರುಕುಳ, ಹಲ್ಲೆ ಮತ್ತು ಕೊಲೆ ಬೆದರಿಕೆ ಆರೋಪದಡಿ ದೂರು ದಾಖಲಿಸಿದ್ದರು. ಎಸ್ಪಿ ಅನೂಪ್ ಸಿಂಗ್ ಪ್ರಕಾರ, ಈ ಹಿಂದೆ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಭರವಸೆ ನೀಡಿದ್ದು, ತಮ ಅಧಿಕಾರಿಗಳಿಗೆ ಅಪರಾಧ ನಡೆದ ಸ್ಥಳದಲ್ಲಿ ಇರುವಂತೆ ಸೂಚಿಸಿದ್ದಾರೆ.
ಸುನಿಲ್ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದು, ಸಿಂಗ್ಪುರ ಬ್ಲಾಕ್ನಲ್ಲಿರುವ ಪನ್ಹೋನಾ ಕಾಂಪೋಸಿಟ್ ಸ್ಕೂಲ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 2020 ರಲ್ಲಿ ಶಿಕ್ಷಕರಾಗುವ ಮೊದಲು, ಅವರು ಉತ್ತರ ಪ್ರದೇಶ ಪೊಲೀಸ್ನಲ್ಲಿ ಸೇವೆ ಸಲ್ಲಿಸಿದ್ದರು. ಎಲ್ಲಾ ನಾಲ್ವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.