ಬೆಂಗಳೂರು,ಮಾ.4-ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ದಲಿತರ ಹಣ ದುರ್ಬಳಕೆ ಮಾಡಿಕೊಂಡು ಅನ್ಯಾಯ ಮಾಡಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ನಗರದಲ್ಲಿಂದು ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿದ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪ್ರಮುಖರುರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ವಿಜಯೇಂದ್ರ ಮಾತನಾಡಿ, ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಕಾಯಕ ಸಮುದಾಯಗಳಿಗೆ ಆರ್ಥಿಕ ಶಕ್ತಿ ಕೊಟ್ಟು ಅವರನ್ನು ಮುಂದಕ್ಕೆ ತರುವ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದ್ದಾರೆ.
ಮುಸ್ಲಿಮರನ್ನು ಓಲೈಸಲು ಹೊರಟ ಕಾಂಗ್ರೆಸ್ ಸರಕಾರವು, ಇತರರೆಲ್ಲರಿಗೂ ಅನ್ಯಾಯ ಮಾಡಲು ಹೊರಟಿದೆ ಎಂದು ಆಕ್ಷೇಪಿಸಿದರು. ಸಿದ್ದರಾಮಯ್ಯನವರು ನಿಜವಾಗಿಯೂ ಅಹಿಂದ ನಾಯಕರೇ ಆಗಿದ್ದರೆ ಇಷ್ಟೊತ್ತಿಗೆ ಅನೇಕ ಹಿಂದುಳಿದ ಸಮಾಜಗಳಿಗೆ ಆರ್ಥಿಕ ಶಕ್ತಿ ತುಂಬಬೇಕಿತ್ತು. ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾ ಹಿಸಲು ನೀವು ಕೈ ಜೋಡಿಸಬೇಕಿತ್ತು ಎಂದು ತಿಳಿಸಿದರು. ಮಡಿವಾಳರು, ಸವಿತಾ ಸಮಾಜ ಸೇರಿ ಅನೇಕ ಕಾಯಕ ಸಮುದಾಯಗಳು ನಾಡಿನಲ್ಲಿವೆ ಎಂದರು. ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿಯ ನಿರ್ಧಾರ ತೆಗೆದುಕೊಳ್ಳಲು ಹೊರಟಿದ್ದಾರೆ. ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರು ಮಾತ್ರವೇ? ಎಂದು ಆಕ್ಷೇಪಿಸಿದರು.
ಬಡವರ ಹೊಟ್ಟೆ ಮೇಲೆ ಹೊಡೆದ ಕಾಂಗ್ರೆಸ್ ಸರ್ಕಾರ ತೊಲಗಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಕ್ಕೆ ಮೀಸಲಿಟ್ಟ ಎಲ್ಲ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಕೊಟ್ಟು ಅನ್ಯಾಯ ಮಾಡಿದೆ. ಕಾಂಗ್ರೆಸ್ ಸರ್ಕಾರ ಪರಿಶಿಷ್ಟರ ಹಣ ನುಂಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ದೂರಿದರು. ಪರಿಶಿಷ್ಟ ಜಾತಿ, ಪಂಗಡ ಜನಾಂಗದ ಅನುದಾನವನ್ನು ಅನ್ಯ ಯೋಜನೆಗಳಿಗೆ ಬಳಕೆ ಮಾಡಬಾರದು ಎಂದು ಕಾನೂನಿನಲ್ಲಿ ಇದೆ. ಆದರೆ, ಸಿದ್ದರಾಮಯ್ಯ ನೇತೃತ್ವದಲ್ಲಿ
ಗ್ಯಾರಂಟಿಗೆ ಬಳಕೆ ಮಾಡಿದ್ದು ಖಂಡನೀಯ ಎಂದು ಹೇಳಿದರು.
ವಿಜಯೇಂದ್ರ ವಾಗ್ದಾಳಿ
ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನ ಮಾಡಲು ಸಾಧ್ಯವಾಗದೆ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ದುರುಪಯೋಗ ಪಡಿಸಿದ ಭ್ರಷ್ಟ, ದುಷ್ಟ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆ ನೀಡಲು ನಾವು ಇಲ್ಲಿ ಸೇರಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು. ನಗರದ ಫ್ರೀಡಂ ಪಾರ್ಕ್‌ನಲ್ಲಿ ಇಂದು ನಡೆದ ಎಸ್‌ಸಿಪಿ-ಟಿಎಸ್‌ಪಿ ಹಣ ದುರ್ಬಳಕೆ ಮಾಡಿಕೊಂಡ ದಲಿತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ದುಷ್ಟ, ದಲಿತ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ. ನಮ್ಮ ಹೋರಾಟ ನಿರಂತರವಾಗಿರಲು ಕೈಜೋಡಿಸಿ ಎಂದು ಕರೆ ನೀಡಿದರು.
ನಾಳೆ ಬೆಳಿಗ್ಗೆ ಇದೇ ಜಾಗದಲ್ಲಿ ಬೃಹತ್ ಹೋರಾಟ ನಡೆಯಲಿದೆ. ಎಲ್ಲರೂ ಭಾಗವಹಿಸಿ ಎಂದು ಮನವಿ ಮಾಡಿದರು. ಬಿಜೆಪಿ ಸರಕಾರಗಳು ಪರಿಶಿಷ್ಟ ಜಾತಿ, ಪಂಗಡದ ಹಣ ದುರ್ಬಳಕೆ ಮಾಡಿಲ್ಲ: ಮಾಡುವುದೂ ಇಲ್ಲ ಎಂದು ಹೇಳಿದರು. ಈ ದಲಿತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡುತ್ತ ಬಂದಿದೆ ಎಂದು ಅವರು ನುಡಿದರು. ಬಿಜೆಪಿ ಯಾವತ್ತೂ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಪರವಾಗಿದೆ ಎಂದು ವಿವರಿಸಿದರು. ಸಚಿವರೊಬ್ಬರು ಬಿಜೆಪಿ ಆಡಳಿತದ ಇತರ ರಾಜ್ಯಗಳ ಸರಕಾರಗಳ ಕುರಿತು ತಪ್ಪು ಮಾಹಿತಿ ನೀಡಿದ್ದಾಗಿ ಆಕ್ಷೇಪಿಸಿದರು.
ರಾಜ್ಯದ ಎಸ್‌ಸಿ, ಎಸ್‌ಟಿ ಸಮುದಾಯಗಳ ಹಣವನ್ನು ದುರುಪಯೋಗ ಮಾಡುವ ದುಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ 14 ತಂಡಗಳನ್ನು ರಚಿಸಿ ಜನಾಂದೋಲನ ರೂಪಿಸಲಾಗಿದೆ. ಚುನಾವಣೆ ಪೂರ್ವದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯ ಸೇರಿ ಎಲ್ಲರಿಗೂ ನ್ಯಾಯ ಕೊಡುವುದಾಗಿ ಹಾಗೂ ಅಭಿವೃದ್ಧಿ ಮಾಡುವುದಾಗಿ ಕಾಂಗ್ರೆಸ್ ಹೇಳಿ ಅಧಿಕಾರಕ್ಕೆ ಬಂದಿದೆ ಎಂದು ವಿವರಿಸಿದರು.ಬಿಬಿಎಂಪಿಯಲ್ಲಿ ಬಿಜೆಪಿ ಸ್ವಂತ ಶಕ್ತಿಯಲ್ಲಿ ಅಧಿಕಾರ ಪಡೆಯುವಂತಾಗಬೇಕಿದೆ. ಮುಂದಿನ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯು ಕಾರ್ಯಕರ್ತರಿಗೆ ಶಕ್ತಿ ತುಂಬಲಿದೆ.
ನಾವೆಲ್ಲರೂ ಒಗ್ಗೂಡಿ ಕಾರ್ಯಕರ್ತರ ಚುನಾವಣೆ ಎದುರಿಸಿ ಗೆಲ್ಲಿಸಲಿದ್ದೇವೆ ಎಂದು ವಿಶ್ವಾಸದಿಂದ ತಿಳಿಸಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಸರಕಾರದಲ್ಲಿ ದುಡ್ಡಿಲ್ಲ; ಬೊಕ್ಕಸ ಖಾಲಿಯಾದ ಕಾರಣ ದಲಿತರ ಉದ್ದಾರಕ್ಕೆ ಮೀಸಲಾಗಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸುತ್ತಿದ್ದಾರೆ.ನಾನು ಸಿದ್ದಣ್ಣ, ಲೂಟಿ ಗ್ಯಾರಂಟಿ ಅಣ್ಣ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯವನ್ನು ಭಿಕ್ಷೆ ಬೇಡುವ ಸ್ಥಿತಿಗೆ ಸಿದ್ದರಾಮಯ್ಯನವರು ತಂದು ನಿಲ್ಲಿಸಿದ್ದಾರೆ. ಸಿದ್ದರಾಮಯ್ಯನವರು ಸಾಲದ ವಿಚಾರದಲ್ಲೂ ಚಾಂಪಿಯನ್ ಎಂದು ಆಕ್ಷೇಪಿಸಿದರು. ಎಲ್ಲನಿಗಮ, ತಾಂಡಾ ಅಭಿವೃದ್ಧಿ ನಿಗಮಗಳಿಗೆ ಕನಿಷ್ಠ ಮೊತ್ತವನ್ನು ಈ ಮನೆಹಾಳ ಕಾಂಗ್ರೆಸ್ ಸರಕಾರ ನೀಡಿದೆ ಎಂದು ಆರೋಪಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ದಲಿತರ ಹಣ ದುರ್ಬಳಕೆ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಜನಾಂದೋಲನ ರೂಪಿಸಿದೆ. ಬಿಜೆಪಿಯ ದಲಿತಪರ ಚಿಂತನೆ, ಅವರ ಪರವಾದ ಯೋಜನೆಗಳೇ ಕಾರಣ ಎಂದು ತಿಳಿಸಿದರು. ನಮ್ಮ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಈ ವಿಷಯವನ್ನು ತೀಕ್ಷವಾಗಿ ಪರಿಗಣಿಸಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷ ತಲೆ ಎತ್ತಿ ತಿರುಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.
ಕೌನ್ಸಿ ಲರ್ ಚುನಾವಣೆ ಹತ್ತಿರದಲ್ಲಿರುವಂತೆ ಕಾಣುತ್ತಿದೆ. ಕೋರ್ಟಿನ ಆದೇಶದ ಕಾರಣ ಚುನಾವಣೆ ನಡೆಯುವ ಸಾಧ್ಯತೆ ಇದೆ. ನಾವು ಜನರನ್ನು ಭೇಟಿ ಮಾಡಿ ಮನೆಮನೆಗೆ ಹೋಗಿ ಅವರನ್ನು ಪ್ರೇರೇಪಿಸಬೇಕು. ಬಿಜೆಪಿ ಕಾರ್ಯಕರ್ತರನ್ನು ನಾವು ಉತ್ತೇಜಿಸಬೇಕು ಎಂದು ಮನವಿ ಮಾಡಿದರು. ಈ ಹೋರಾಟಕ್ಕೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಶಾಸಕರಾದ ಎಸ್.ಆರ್.ವಿಶ್ವನಾಥ್, ಬೈರತಿ ಬಸವರಾಜ್, ಮಾನಪ್ಪ ವಜ್ಜಲ್, ಉದಯ್ ಗರುಡಾಚಾರ್ ರಘು, ಸಿಮೆಂಟ್ ಮಂಜು, ಭಾಗೀರಥಿ ಮರುಳಸಿದ್ದಯ್ಯ, ಮಾಜಿ ಶಾಸಕ ಹಾಲಪ್ಪ, ಪ್ರಕೋಷ್ಠಗಳ ಸಂಯೋಜಕ ದತ್ತಾತ್ರಿ, ಮುಖಂಡರಾದ ತಮೇಶ್ ಗೌಡ, ಶರಣು ತಳ್ಳಿಕೇರಿ, ಉಮೇಶ್ ಶೆಟ್ಟಿ, ರವೀಂದ್ರ, ನಗರದ ಜಿಲ್ಲೆಗಳ ಅಧ್ಯಕ್ಷರಾದ ಹರೀಶ್, ರಾಮಮೂರ್ತಿ, ಸಪ್ತಗಿರಿ ಗೌಡ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.