Friday, April 25, 2025
Homeರಾಜ್ಯಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ-2 ಆರಂಭ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ-2 ಆರಂಭ

Second PUC Exam-2 begins today

ಬೆಂಗಳೂರು,ಏ.24– ದ್ವಿತೀಯ ಪಿಯುಸಿ ಪರೀಕ್ಷೆ-2 ಇಂದಿನಿಂದ ರಾಜ್ಯಾದ್ಯಂತ ಪ್ರಾರಂಭವಾಗಿದೆ. ಇಂದಿನಿಂದ ಮೇ 8 ರವರೆಗೆ ಈ ಪರೀಕ್ಷೆ ನಡೆಯಲಿದ್ದು, 2,71,000 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. 73,000 ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಲು ನೊಂದಾಯಿಸಿಕೊಂಡಿದ್ದಾರೆ. ರಾಜ್ಯದ 335 ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆಯೊಂದಿಗೆ ಪರೀಕ್ಷೆ ಆರಂಭವಾಗಿದೆ.

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ-2 ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಶುಭಾಶಯ ಕೋರಿದ್ದಾರೆ. ಮೊದಲ ಪ್ರಯತ್ನದಲ್ಲಿ ಹಿನ್ನಡೆಗೆ ಕುಗ್ಗದೆ ಮರುಪ್ರಯತ್ನ ಮಾಡುತ್ತಿರುವ ನಿಮಗೆ ನನ್ನ ಅಭಿನಂದನೆಗಳು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದು ಕೇವಲ 2ನೇ ಅವಕಾಶವಲ್ಲದೆ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳುವ ಉದ್ದೇಶದಿಂದ ಹೆಚ್ಚಿನ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿರುವುದು ಸಂತಸದ ವಿಚಾರ. ವಿದ್ಯಾರ್ಥಿಗಳ ಈ ಪ್ರಯತ್ನವನ್ನು ಮೆಚ್ಚಲೇಬೇಕೆಂದು ಅವರು ಹೇಳಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ-1 ರಲ್ಲಿ ಕೈಗೊಂಡಂತೆ ಪರೀಕ್ಷೆ-2ರಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲೆಡೆ ಸುಸೂತ್ರವಾಗಿ ಪರೀಕ್ಷೆ ನಡೆಯುತ್ತಿದೆ ಎಂದು ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ದೇಶಕ ಗೋಪಾಲಕೃಷ್ಣ ತಿಳಿಸಿದರು.

ಮೊದಲ ದಿನವಾದ ಇಂದು ಕನ್ನಡ ಮತ್ತು ಅರೆಬಿಕ್ ಭಾಷಾ ಪರೀಕ್ಷೆಗಳು ನಡೆದಿವೆ. ನಾಳೆ ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿದ್ದು, ಎ.26 ರಂದು ಇತಿಹಾಸ, ಭೌತಶಾಸ್ತ್ರ, ಏ.28 ರಂದು ಭೂಗೋಳಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ ಹಾಗೂ ಏ.29 ರಂದು ಇಂಗ್ಲೀಷ್ ಪರೀಕ್ಷೆ ನಡೆಯಲಿವೆ.

ಮೇ 2 ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣಶಾಸ್ತ್ರ, ಗೃಹವಿಜ್ಞಾನ, ಮೇ 3 ರಂದು ಸಮಾಜಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕವಿಜ್ಞಾನ, ಮೇ 5 ರಂದು ಅರ್ಥಶಾಸ್ತ್ರ, ಮೇ 6 ರಂದು ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ, ಮೇ 7 ರಂದು ಹಿಂದಿ ಪರೀಕ್ಷೆಗಳು ನಡೆಯಲಿವೆ.

ಮೇ 8 ರಂದು ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಭಾಷಾ ಪರೀಕ್ಷೆಗಳು ನಡೆಯಲಿದ್ದು, ಮಧ್ಯಾಹ್ನ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್ ಮತ್ತು ಬ್ಯೂಟಿ ಆಂಡ್ ವೆಲ್‌ನೆಸ್ ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ.

ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟವಾಗಿದೆ. ಕಡಿಮೆ ಫಲಿತಾಂಶ ಬಂದಿರುವ ವಿದ್ಯಾರ್ಥಿಗಳು ಸುಧಾರಿಸಿಕೊಳ್ಳಲು ಈ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಈ ಪರೀಕ್ಷೆ ಫಲಿತಾಂಶದ ನಂತರ 3ನೇ ಪರೀಕ್ಷೆ ಬರೆಯುವ ಅವಕಾಶವನ್ನು ಮಂಡಳಿ ಕಳೆದ ಬಾರಿಯಂತೆ ಈ ಬಾರಿಯೂ ಕಲ್ಪಿಸಲಿದೆ.

RELATED ARTICLES

Latest News