ನವದೆಹಲಿ,ಏ.4– ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಯ ಬಗ್ಗೆ ಸಮಾಜ ವಿರೋಧಿ ಶಕ್ತಿಗಳಿಂದ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ದೇಶದ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಆಗೇಯ ದೆಹಲಿಯ ಸೂಕ್ಷ್ಮ ಪ್ರದೇಶಗಳಾದ ಜಾಮಿಯಾ ನಗರ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸೇರಿದಂತೆ ಇತರ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ದೆಹಲಿ ಪೊಲೀಸರು ಅರೆಸೈನಿಕ ಪಡೆಗಳೊಂದಿಗೆ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ತೀವ್ರಗೊಳಿಸಿದ್ದಾರೆ.
ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು, ನಾವು ರಾತ್ರಿ ಗಸ್ತು ತೀವ್ರಗೊಳಿಸಿದ್ದೇವೆ ಮತ್ತು ಹೆಚ್ಚುವರಿ ನಿಯೋಜನೆಯನ್ನು ವ್ಯವಸ್ಥೆ ಮಾಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಸೂದೆಯನ್ನು ಇಂದು ಮುಂಜಾನೆ ರಾಜ್ಯಸಭೆಯಲ್ಲೂ ಅಂಗೀಕರಿಸಲಾಗಿದೆ. ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ರಾಷ್ಟ್ರ ರಾಜಧಾನಿ ಅಲ್ಲದೆ ದೇಶದ ಇತರ ಕೆಲ ಸೂಕ್ಷ್ಮ ಪ್ರದೇಶಗಳಲ್ಲೂ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.