ಬೆಂಗಳೂರು, ಸೆ.29- ಕಾವೇರಿ ಕಿಚ್ಚು ಹೆಚ್ಚಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿ ಹಾಗೂ ಗೃಹ ಕಚೇರಿ ಕೃಷ್ಣಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮುಖ್ಯಮಂತ್ರಿ ಕಚೇರಿ ಹಾಗೂ ನಿವಾಸದ ಎದುರು ಪ್ರತಿಭಟನೆ ನಡೆಸಬಹುದು ಎಂಬ ಹಿನ್ನೆಲೆಯಲ್ಲಿ ಮುಂಜಾಗೃತೆ ವಹಿಸಲಾಗಿತ್ತು.
ನಾಲ್ಕಕ್ಕೂ ಹೆಚ್ಚು ಬಿಎಂಟಿಸಿ ಬಸ್‍ಗಳು ಹಾಗೂ ಪೊಲೀಸ್ ವ್ಯಾನ್‍ಗಳನ್ನು ಮುಖ್ಯಮಂತ್ರಿ ಮನೆ ಎದುರು ಕಾಯ್ದಿರಿಸಲಾಗಿತ್ತು. ಅನಿರೀಕ್ಷಿತವಾಗಿ ನುಗ್ಗುವ ಕಾರ್ಯಕರ್ತರನ್ನು ನಿರ್ಬಂಧಿಸಲು ಮತ್ತು ಅವರನ್ನು ವಶಕ್ಕೆ ತೆಗೆದುಕೊಳ್ಳಲು ಅನುಕೂಲವಾಗುವಂತೆ ಅಗತ್ಯ ಪೊಲೀಸ್ ಸಿಬ್ಬಂದಿ ಮತ್ತು ವಾಹನ ವ್ಯವಸ್ಥೆಗಳನ್ನು ಸಿದ್ಧವಾಗಿಟ್ಟುಕೊಳ್ಳಲಾತ್ತು.
ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ, ಸಿಎಂ ಮನೆ ಮೇಲೆ ದಾಳಿಗೆ ಯತ್ನ
ಈ ಮೊದಲು ಸೆ.26ರಂದು ಬೆಂಗಳೂರು ಬಂದ್ ನಡೆಸಿದ್ದ ಕಬ್ಬುಬೆಳೆಗಾರರ ಸಂಘ ಹಾಗೂ ಇತರ ಕೆಲ ಸಂಘಟನೆಗಳ ಮುಖಂಡರು ತಮ್ಮ ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡಿದ್ದವು.
ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ತಕ್ಷಣವೇ ನಿಲ್ಲಸಬೇಕು ಎಂಬ ಪ್ರಮುಖ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಸಂಘಟನೆಗಳು ಇಂದು ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿವೆ. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿತ್ತು. ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ನಿಯೋಗದ ಜೊತೆಗೆ ಮುಖ್ಯಮಂತ್ರಿ ಮಧ್ಯಾಹ್ನ ಮಾತುಕತೆ ನಡೆಸಲಿದ್ದಾರೆ.