ಬೆಂಗಳೂರು,ಮೇ.8– ರಾಯಚೂರು ಉಷ್ಣ ವಿದ್ಯುತ್ ಉಪಸ್ಥಾವರ, ಕೈಗಾ ಅಣು ವಿದ್ಯುತ್ ಉತ್ಪಾದನಾ ಸ್ಥಾವರ, ಕೆ.ಆರ್.ಎಸ್ ಅಣೆಕಟ್ಟು ಸೇರಿದಂತೆ ಹಲವು ಕಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಲ್ಲಿ ಕೆಲವು ವಿಶೇಷ ಪಡೆಗಳಿವೆ. ಅವುಗಳಿಗೆ ಕಮ್ಯಾಂಡೋ ತರಬೇತಿಗಳಾಗಿರುತ್ತವೆ. ಕೈಗಾರಿಕಾ ಭದ್ರತಾ ಪಡೆಗಳೂ ಕೂಡ ಉತ್ತಮ ತರಬೇತಿ ಹೊಂದಿದ ಸಂಸ್ಥೆ. ಅಂತಹ ಸಿಬ್ಬಂದಿಗಳನ್ನು ಭದ್ರತಾ ಕೆಲಸಗಳಿಗೆ ನಿಯೋಜಿಸಲಾಗುವುದು ಎಂದರು.
ರಾಜ್ಯದಲ್ಲಿ ಭದ್ರತಾ ಸಿಬ್ಬಂದಿಗಳ ಸಂಖ್ಯೆ ಸಾಕಷ್ಟಿದೆ. ಇರುವವರನ್ನೇ ಬಳಕೆ ಮಾಡಿಕೊಳ್ಳುತ್ತಿದ್ದೇವೆ.ಚ ಹೆಚ್ಚುವರಿಯಾಗಿ ಮತ್ತಷ್ಟು ಸಿಬ್ಬಂದಿ ಬೇಕಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ಏಕಾಏಕಿ ನೇಮಕಾತಿ ಮಾಡಿ ಭದ್ರತೆಗೆ ನಿಯೋಜಿಸಲಾಗುವುದಿಲ್ಲ. ಸುಮಾರು ಒಂದು ವರ್ಷಗಳ ಕಾಲ ಕಾಲಾವಕಾಶವಾದರೂ ಬೇಕಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಯನುಸಾರ ರಾಜ್ಯದಲ್ಲಿ 3 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗಿದೆ. ಇಂದು ಮತ್ತು ನಾಳೆ ಬೇರೆಬೇರೆ ಜಿಲ್ಲೆಗಳಲ್ಲೂ ಮಾಕ್ ಡ್ರಿಲ್ ನಡೆಸಲಾಗುವುದು. ಬೆಂಗಳೂರಿನಲ್ಲಿ ಅಗ್ನಿಶಾಮಕ ದಳದ ಅಣಕು ಪ್ರದರ್ಶನ ನಡೆದಿದೆ. ಮಾಕ್ ಡ್ರಿಲ್‌ಗೆ ಹೆಚ್ಚುವರಿಯಾಗಿ ನಾವು ಮೈಸೂರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಗುಪ್ತದಳದ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲೆಗಳನ್ನು ಮಾಕ್ ಡ್ರಿಲ್‌ಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದರು.
ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೆ ಹೆಚ್ಚು ಜಾಗೃತರಾಗಿರುವಂತೆ ಗಂಭೀರ ಸೂಚನೆ ನೀಡಲಾಗಿದೆ. ಅದರನುಸಾರ ತಯಾರಿಗಳು ನಡೆದಿವೆ. ಅಗ್ನಿಶಾಮಕ ದಳದಲ್ಲಿ ವಾಹನಗಳ ಕೊರತೆ, ಸಿಬ್ಬಂದಿಗಳ ಕೊರತೆ ಎಂದೆಲ್ಲಾ ಈ ಹಂತದಲ್ಲಿ ಚರ್ಚೆ ಮಾಡುವುದು ಸೂಕ್ತ ಅಲ್ಲ. ನೇಮಕಾತಿ ಹಾಗೂ ಮೂಲಸೌಕರ್ಯಗಳ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿರುತ್ತದೆ ಎಂದರು.ನಾಳೆ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿಯ ವರದಿಯ ಕುರಿತು ಚರ್ಚೆಯಾದರೂ ಆಗಬಹುದು. ಸದ್ಯಕ್ಕೆ ಇನ್ನೂ ಅಜೆಂಡಾ ಬಂದಿಲ್ಲ ಎಂದು ತಿಳಿಸಿದರು.