ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳು ಬೇಕು ಬೇಕು ಎಂದು ಹಂಬಲಿಸುವವರು ಸೀಸ್ ಕಡ್ಡಿಯನ್ನ ನೋಡಬೇಕು. ಗ್ರಹಣ ಪ್ರೊಡಕ್ಷನ್ ನಡಿಯಲ್ಲಿ ರತನ್ ಗಂಗಾಧರ್ ನಿರ್ದೇಶನ ಮಾಡಿರುವ ಸೀಸ್ ಕಡ್ಡಿ ಸಿನಿಮಾದಲ್ಲಿ ರೇಖಾ ಕೂಡ್ಲಗಿ, ಸೌಮ್ಯ ಜಗನ್ ಮೂರ್ತಿ, ರಾಘವೇಂದ್ರ ಭಟ್, ನಾಗರಾಜ್ ರಾವ್ ನಟಿಸಿದ್ದಾರೆ. ರತನ್ ಗಂಗಾಧರ್ ಒಂದೊಳ್ಳೆ ಕಂಟೆಂಟ್ ಅನ್ನು ಇಟ್ಟುಕೊಂಡು ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ.
ಸಿನಿಮಾದಲ್ಲಿ ನೋಡುಗರನ್ನ ಹಲವು ಪಾತ್ರಗಳು ಕಾಡುತ್ತವೆ. ಒಂದೊಂದು ಪಾತ್ರಗಳು ಕೂಡ ಸಿನಿಮಾ ಮುಗಿಯುವ ಹೊತ್ತಿಗೆ ನಮ್ಮನ್ನ ಆವರಿಸಿಕೊಂಡು ಬಿಡುತ್ತವೆ. ಆ ಪಾತ್ರಗಳಲ್ಲಿ ಯಾವುದೋ ಒಂದು ಪಾತ್ರ ನಾವಾಗಿ ಬಿಡುತ್ತೇವೆ. ತಂದೆಯನ್ನ ನೋಡಿಕೊಳ್ಳುವ ಆ ಹುಡುಗಿಯೋ, ಆ ಬೈಕ್ ರಿಪೇರಿ ಮಾಡುವಾತನೋ ಅಥವಾ ಮಗದೊಂದು ಪಾತ್ರವೋ. ಇಷ್ಟು ಹೇಳುವಾಗಲೇ ನಿಮಗೆ ಅರ್ಥವಾಗಿರಬೇಕು ಕಥೆಯ ಆಳ ಎಷ್ಟಿದೆ ಎಂಬುದು. ಆ ಪಾತ್ರಗಳ ಭಾವನೆ ಮನಸ್ಸಿಗೆ ಮುಟ್ಟಬೇಕು ಅಂದ್ರೆ ಥಿಯೇಟರ್ ನಲ್ಲಿ ಸಿನಿಮಾ ನೋಡಿದರೇನೆ ಚೆಂದ.

ಈ ಸಿನಿಮಾದಲ್ಲಿ ಬಹಳ ಮುಖ್ಯವಾಗಿ ನಮಗೆ ಇಷ್ಟವಾಗುವುದು ಕನ್ನಡ. ನಮಗೆ ಗೊತ್ತಿರುವ ಕನ್ನಡ ಬಿಟ್ಟು ಇನ್ನು ಹಲವು ರೀತಿಯ ಕನ್ನಡ ನಮ್ಮ ಕಿವಿಗೆ ಇಂಪು ಎನಿಸುತ್ತದೆ, ಕೇಳೋದಕ್ಕೆ ಎಷ್ಟೊಂದು ಚೆಂದ ಅನ್ನಿಸದೆ ಇರಲಾರದು. ಬೆಂಗಳೂರು ಕನ್ನಡ, ಶಿರಸಿ ಕನ್ನಡ, ಉತ್ತರ ಕನ್ನಡ ಕನ್ನಡ ಜೊತೆಗೆ ಪಕ್ಕಾ ಗ್ರಾಮೀಣ ಭಾಷೆಯ ಕನ್ನಡವನ್ನ ಬಳಕೆ ಮಾಡಿದ್ದಾರೆ. ನಿರ್ದೇಶಕ ರತನ್ ಗಂಗಾಧರ್ ಮೂಲತಃ ತುಮಕೂರಿನವರಾದರು ಹಲವು ಕನ್ನಡ ಭಾಷೆಯನ್ನ ಿಲ್ಲಿ ತಂದಿರುವುದು ಮನಸ್ಸಿಗೆ ಮುದ ನೀಡುತ್ತದೆ.
ಆರಂಭದಲ್ಲಿ ಪಾತ್ರಗಳ ಪರಿಚಯದ ಜೊತೆಗೆ ಕಥೆಯೂ ತೆರೆದುಕೊಳ್ಳುತ್ತದೆ. ಪ್ರೇಕ್ಷಕನ ತಾಳ್ಮೆ ಜೊತೆಗಿದ್ದರೆ ಮರೆಯಲಾರದಂತ ಕಥೆ ಮನಸ್ಸಿಗೆ ಅಚ್ಚೊತ್ತುವುದು ಪಕ್ಕ. ಸದ್ಯ ಥಿಯೇಟರ್ ನಲ್ಲಿ ಸೀಸ್ ಕಡ್ಡಿ ಪ್ರದರ್ಶನ ಕಾಣ್ತಾ ಇದ್ದು, ಬಾಲ್ಯದ ಸೀಸ್ ಕಡ್ಡಿ ನೆನಪಿನ ಜೊತೆಗೆ ಒಂದಷ್ಟು ಭಾವನಾತ್ಮಕ ಬಂಧ ಬೆಸೆಯೋದು ಕನ್ಫರ್ಮ್.