ಬೆಂಗಳೂರು,ಅ.24- ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಅಳೆದು ತೂಗಿ ಲೆಕ್ಕಾಚಾರಗಳನ್ನು ನಡೆಸುತ್ತಿದ್ದು, ಆಕಾಂಕ್ಷಿಗಳು ಮುಖಂಡರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ.ಇದ್ದಕ್ಕಿದ್ದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಪುತ್ರಿ ವೈಶಾಲಿಯ ಹೆಸರು ಹಾವೇರಿ ಕ್ಷೇತ್ರಕ್ಕೆ ಕೇಳಿಬಂದಿದ್ದು, ಕುತೂಹಲ ಹೆಚ್ಚಿಸಿದೆ.
ಮಾಜಿ ಶಾಸಕ ಅಜ್ಜಂಪಿರ್ ಖಾದ್ರಿ ಟಿಕೆಟ್ಗಾಗಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸುವ ಯತ್ನ ನಡೆಸಿದ್ದಾರೆ.ನಾಳೆ ನಾಮಪತ್ರ ಸಲ್ಲಿಕೆಯ ಕೊನೆ ದಿನವಾಗಿರುವುದರಿಂದಾಗಿ ಆಕಾಂಕ್ಷಿಗಳ ಲಾಬಿ ತೀವ್ರಗೊಂಡಿದೆ. ಅಜ್ಜಂಪಿರ್ ಖಾದ್ರಿ ಮತ್ತು ಸಯ್ಯದ್ ಯಾಸಿರ್ ಪಠಾಣ್ ಅವರೊಂದಿಗೆ ವಿನಯ್ ಕುಲಕರ್ಣಿಯವರ ಪುತ್ರಿಯೂ ಅಖಾಡ ಪ್ರವೇಶಿಸಿದ್ದಾರೆ.
ಪಂಚಮಸಾಲಿ ಸಮುದಾಯ ವಿನಯ್ ಕುಲಕರ್ಣಿಯವರ ಪುತ್ರಿಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದೆ.ಸುಮಾರು ಹಲವು ಚುನಾವಣೆಗಳಿಂದಲೂ ಶಿಗ್ಗಾಂವಿಯಲ್ಲಿ ಅಲ್ಪಸಂಖ್ಯಾತರಿಗೆ ಮಣೆ ಹಾಕಲಾಗುತ್ತಿದೆ. ಇದು ಸೋಲಿಗೆ ಕಾರಣವಾಗುತ್ತಿದೆ ಎಂಬ ವ್ಯಾಖ್ಯಾನಗಳೂ ಇವೆ. ಈ ಬಾರಿ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ವಿನಯ್ ಕುಲಕರ್ಣಿಗೆ ಕಾನೂನಿನ ತೊಡಕು ಇರುವುದರಿಂದಾಗಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಕಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ ಪತ್ನಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಹೈಕಮಾಂಡ್ ಅದನ್ನು ಪರಿಗಣಿಸಲಿಲ್ಲ. ಈಗ ಉಪಚುನಾವಣೆಯಲ್ಲಿ ತಮ ಪುತ್ರಿಗೆ ಟಿಕೆಟ್ ನೀಡಬೇಕು ಎಂದು ವಿನಯ್ ಕುಲಕರ್ಣಿ ದಾಳ ಉರುಳಿಸಿದ್ದಾರೆ.
ಹೀಗಾಗಿ ಶಿಗ್ಗಾಂವಿಯಲ್ಲಿ ಲಿಂಗಾಯತ v/s ಅಲ್ಪಸಂಖ್ಯಾತ ಎಂಬ ಪೈಪೋಟಿ ನಡೆಯುತ್ತಿದೆ. ವಿನಯ್ ಕುಲಕರ್ಣಿಯವರ ಪುತ್ರಿ ವೈಶಾಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ ತಂದೆಯ ಪರವಾಗಿ ಬಿರುಸಿನ ಪ್ರಚಾರ ನಡೆಸಿ ರಾಜಕೀಯ ಅಂಗಳದಲ್ಲಿ ಕಾಣಿಸಿಕೊಂಡಿದ್ದರು. ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಅಜ್ಜಂಪಿರ್ ಖಾದ್ರಿ, ಪಕ್ಷದ ನಿರ್ಧಾರಕ್ಕೆ ತಾವು ಬದ್ಧರಾಗಿದ್ದು, ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಪೈಪೋಟಿ ಹೆಚ್ಚಾಗಿದೆ. ವರಿಷ್ಠರು ತಮಗೆ ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಕ್ಷೇತ್ರಕ್ಕೆ ಹೊರಗಿನವರನ್ನು ಅಭ್ಯರ್ಥಿಯನ್ನಾಗಿ ಮಾಡಬಾರದು. ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡುವುದನ್ನು ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ಎಲ್ಲಾ ಮುಖಂಡರೂ ಮನವಿ ಮಾಡಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಟಿಕೆಟ್ ಕೊಟ್ಟರೆ ಗೆಲ್ಲುತ್ತೇನೆ. ಈ ಬಾರಿ ನನಗೆ ಜನರ ಅನುಕಂಪ ಇದೆ. ಕಾರ್ಯಕರ್ತರೂ ಕೂಡ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದರು.
ಇತ್ತ ಸಚಿವ ಈಶ್ವರ್ ಖಂಡ್ರೆಯವರು ಮಾತನಾಡಿ, ನಾಳೆ ಬೆಳಿಗ್ಗೆ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುತ್ತಾರೆ. ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಗೊಂದಲವೂ ಇಲ್ಲ, ವಿಳಂಬವೂ ಇಲ್ಲ ಎಂದು ಹೇಳಿದ್ದಾರೆ.ಬಹುತೇಕ ಇಂದು ಸಂಜೆಯೊಳಗಾಗಿಯೇ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಲಿದೆ ಎಂದು ತಿಳಿಸಿದ್ದಾರೆ.