ಬೆಂಗಳೂರು, ಮೇ 29- ವಿಧಾನಪರಿಷತ್‌ನಿಂದ ವಿಧಾನಸಭೆಗೆ ಸದಸ್ಯರ ಆಯ್ಕೆಗಾಗಿ ನಡೆಯುವ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ನಡೆಯುತ್ತಿರುವ ಕಸರತ್ತು ಇಂದು ಸಂಜೆ ಅಂತಿಮ ಘಟ್ಟ ತಲುಪುವ ಸಾಧ್ಯತೆಯಿದೆ.
ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಿನ್ನೆಯಿಂದಲೂ ಎಐಸಿಸಿ ಮುಖಂಡರಾದ ರಣಜಿತ್ ಸಿಂಗ್ ಸುರ್ಜೆವಾಲ, ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಸರಣಿ ಸಭೆಯನ್ನು ನಡೆಸಿದ್ದಾರೆ. ಇಂದು ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಸಭೆ ನಡೆಯಲಿದೆ. ಅದರ ಬಳಿಕ ಅಭ್ಯರ್ಥಿಗಳ ಆಯ್ಕೆ ಅಖೈರುಗೊಳ್ಳಲಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಬ್ಬರೂ 70 ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದಾರೆ. ಅದರಲ್ಲಿ ಸಚಿವ ಎನ್.ಎಸ್.ಬೋಸರಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಹೆಸರು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗಿದೆ.
ವಿಧಾನಪರಿಷತ್‌ನ ಸದಸ್ಯ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರ ಆಯ್ಕೆ ವಿಚಾರವಾಗಿ ಖಚಿತತೆ ಇದ್ದರೂ ಕೊನೆ ಕ್ಷಣದಲ್ಲಿ ಗೊಂದಲಗಳು ಏರ್ಪಟ್ಟಿವೆ. ಈಗಾಗಲೇ ಎರಡು ಬಾರಿ ಅವಕಾಶ ಪಡೆದಿರುವ ಗೋವಿಂದ ರಾಜು ಅವರು ಪ್ರಸ್ತುತ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಯಾಗಿ ಸಂಪುಟ ದರ್ಜೆಯ ಸ್ಥಾನ ಹೊಂದಿದ್ದಾರೆ. ಅದಕ್ಕೆ ಶಾಸನಸಭೆಯ ಸದಸ್ಯತ್ವ ಕಡ್ಡಾಯವಲ್ಲದೇ ಇರುವುದರಿಂದ ಒಬ್ಬರಿಗೆ ಒಂದೇ ಹುದ್ದೆ ಎಂಬ ಸೂತ್ರ ಅನುಸರಿಸುವ ಬಗ್ಗೆಯೂ ಚರ್ಚೆಗಳಾಗುತ್ತಿವೆ ಎಂದು ತಿಳಿದುಬಂದಿದೆ.
ಉಳಿದಂತೆ ಹತ್ತಾರು ಮಂದಿ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಮುಖಂಡರ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ.ರಾಜ್ಯ ನಾಯಕರು ಸಂಭವನೀಯರ ಪಟ್ಟಿಯನ್ನು ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ. ಇದರ ಪರಿಶೀಲನೆಯೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.