ಕಲಬುರಗಿ, ಅ.17– ತಡರಾತ್ರಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಹಟ್ಟಿ ಗ್ರಾಮದ ನಿವಾಸಿಗಳಾದ ಮುಜಾಹಿದ್(30), ಹುಸೇನ್(45), ಮೌಲಾಬಿ(50) ಮತ್ತು ಚಿತ್ತಾಪುರದ ಬೈಕ್ ಸವಾರ ರಾಘವೇಂದ್ರ(35) ಮೃತ ದುರ್ದೈವಿಗಳು.
ಹಟ್ಟಿ ಗ್ರಾಮದ ನಿವಾಸಿ -ಫಾಸೀಯಾ ಎಂಬುವರ ಮದುವೆ ನಿಶ್ಚಯವಾಗಿದ್ದು, ಬಟ್ಟೆ ಖರೀದಿಗಾಗಿ ಕುಟುಂಬದವರ ಜೊತೆ ಕಾರಿನಲ್ಲಿ ಆರು ಮಂದಿ ತೆರಳಿ ವಾಪಸ್ ಹಟ್ಟಿ ಗ್ರಾಮಕ್ಕೆ ರಾತ್ರಿ 9.30ರ ಸುಮಾರಿನಲ್ಲಿ ಹಿಂದಿರುಗುತ್ತಿದ್ದರು. ಚಿತ್ತಾಪುರದ ನಿವಾಸಿಯಾದ ರಾಘವೇಂದ್ರ(35) ಎಂಬಾತ ಜಾತ್ರೆ ಮುಗಿಸಿಕೊಂಡು ಸಿಂದಗಿಯಿಂದ ಚಿತ್ತಾಪುರಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಲಬುರಗಿ ತಾಲೂಕಿನ ಹಸನಾಪುರ ಬಳಿ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತನ ಬೈಕ್ ಸಹ ಲಾರಿಗೆ ಸಿಕ್ಕಿಕೊಂಡಿದ್ದರಿಂದ ಲಾರಿ ನಿಂತಿದೆ.
ಈ ಮಾರ್ಗವಾಗಿ ಬರುತ್ತಿದ್ದ ಫಾಸೀಯಾ ಕುಟುಂಬದವರಿದ್ದ ಕಾರು ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ದಾರಿ ಮಧ್ಯೆ ನಿಂತಿದ್ದ ಇದೇ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಕಾರಿನಲ್ಲಿ ಸಿಕ್ಕಿಕೊಂಡಿದ್ದ ಗಾಯಾಳುಗಳನ್ನು ಹೊರಗೆ ಕರೆತಂದು ಕಲ್ಬುರ್ಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಮದುವೆ ಸಂಭ್ರಮದಲ್ಲಿದ್ದ -ಫಾಸೀಯಾ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಅತ್ತ ಬೈಕ್ ಸವಾರನ ಕುಟುಂಬ ಸಹ ಶೋಕದಲ್ಲಿ ಮುಳುಗಿದೆ. ಸರಣಿ ಅಪಘಾತದಿಂದಾಗಿ ಈ ಮಾರ್ಗದಲ್ಲಿ ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸಂಚಾರಿ ಪೊಲೀಸರು ಖುದ್ದು ಸ್ಥಳದಲ್ಲಿದ್ದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನಾಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರಾದ ಡಾ. ಶರಣಬಸಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಂಚಾರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.