ಬೆಂಗಳೂರು,ಜ.2– ರಾಜ್ಯದಲ್ಲಿ ಬಾಣಂತಿಯರ ಸಾವು ದಿನದಿಂದ ದಿನಕ್ಕೆ ಮರಣಮೃದಂಗ ಬಾರಿಸುತ್ತಿದ್ದು, ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆಯಾಗಿರುವುದರಿಂದ ಸರ್ಕಾರ ಕೂಡಲೇ ನ್ಯಾಯಾಂಗದ ತನಿಖೆಗೆ ವಹಿಸಿ ಸಚಿವ ದಿನೇಶ್ಗುಂಡೂರಾವ್ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ 736 ಬಾಣಂತಿಯರ ಸಾವಿನ ಪ್ರಕರಣಗಳು ನಡೆದಿವೆ. ಇದಕ್ಕೆ ಕಳಪೆ ಗುಣಮಟ್ಟದ ಔಷಧಿ ಕಾರಣ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಬಾಣಂತಿಯರ ಸಾವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಸರ್ಕಾರದ ಪ್ರಾಯೋಜಿತ ಕೊಲೆ ಇದಾಗಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ಗುಂಡೂರಾವ್ ತಮ ಸ್ಥಾನದಿಂದ ಮುಂದುವರೆಯಲು ಯಾವುದೇ ನೈತಿಕತೆಯನ್ನು ಇಟ್ಟುಕೊಂಡಿಲ್ಲ. ಎಸ್ಐಟಿ ಬದಲು ನ್ಯಾಯಾಂಗ ತನಿಖೆಗೆ ವಹಿಸಬೇಕು. ಆಗ ಮಾತ್ರ ನಿಷ್ಪಕ್ಷಪಾತವಾಗಿ ತನಿಖೆ ನಡೆದು ಸತ್ಯ ಹೊರಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಳಪೆ ಔಷಧಿ ಮತ್ತು ಐವಿ ದ್ರಾವಣ ಮಿಶ್ರಣದ ಔಷಧಿಯನ್ನು ಸೇವಿಸಿ ಬಾಣಂತಿಯರು ಸತ್ತಿದ್ದಾರೆ. ಆದರೆ ಇದನ್ನು ಆರೋಗ್ಯ ಸಚಿವರು ಒಪ್ಪುತ್ತಿಲ್ಲ. ಏನೂ ಆಗಿಲ್ಲ, ಎಲ್ಲಾ ಕ್ರಮ ಕೈಗೊಂಡಿದ್ದೇವೆ ಎಂದು ಗುಂಡೂರಾವ್ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾನು ಈ ಬಗ್ಗೆ ಬೆಳಗಾವಿಯ ಅಧಿವೇಶನದಲ್ಲೇ ಪ್ರಸ್ತಾಪ ಮಾಡಿದರೆ ನನ್ನ ವಿರುದ್ಧವೇ ಆರೋಗ್ಯ ಸಚಿವರು ಆರೋಪಗಳನ್ನು ಮಾಡಿದರು. ಕಳಪೆ ಔಷಧಿ ಬಗ್ಗೆ ಸರ್ಕಾರ ಒಂದು ನೋಟೀಸ್ ಕೊಟ್ಟಿದೆ. ಅದೇ ರೀತಿ ಡ್ರಗ್ ಕಂಟ್ರೋಲ್ಗೆ ಒಂದು ನೋಟೀಸ್ ಕೊಟ್ಟು ಕೈ ತೊಳೆದುಕೊಂಡಿದೆ. ಈ ಸರ್ಕಾರ ಡ್ರಗ್ ಮಾಫಿಯಾ ನಡೆಸಲು ಹೊರಟಿದೆ ಎಂದು ಗಂಭೀರ ಆರೋಪ ಮಾಡಿದರು.
ಪಶ್ಚಿಮ ಬಂಗಾಳದ ಫಾರ್ಮಾಸ್ಯುಟಿಕಲ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವಲ್ಲಿ ಡ್ರಗ್ ಕಂಟ್ರೋಲರ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರವೇ ನೋಟೀಸ್ನಲ್ಲಿ ಹೇಳಿದೆ. ಈ ಕಂಪನಿಯ ಔಷಧಿಗಳನ್ನು ಸೇವಿಸಿದ ಬಾಣಂತಿಯರು ಸಾವನ್ನಪ್ಪಿದ್ದಾರೆ. ಇದರ ಹಿಂದಿರುವ ಹಿತಾಸಕ್ತಿ ಏನು ಎಂದು ಅವರು ಪ್ರಶ್ನೆ ಮಾಡಿದರು.
ರಾಯಚೂರು ಜಿಲ್ಲೆಯೊಂದರಲ್ಲೇ 11 ಬಾಣಂತಿಯರು ಸಾವನ್ನಪ್ಪಿದ್ದಾರೆ. ಅದೇ ರೀತಿ ತುಮಕೂರು ಜಿಲ್ಲೆ,ತಿಪಟೂರಿನಲ್ಲಿ ಫಿರ್ದೋಜ್ ಎನ್ನುವ ಬಾಣಂತಿ ಕೂಡ ಸಾವನ್ನಪ್ಪಿದ್ದಾರೆ. ಈಗ ಇರುವ ಅವರ ಒಂದು ಮಗು ಅನಾಥವಾಗಿದೆ. ಇದಕ್ಕೆ ಸರ್ಕಾರ ಹೊಣೆ ಅಲ್ಲವೇ? ಎಂದು ಅಶೋಕ್ ಪ್ರಶ್ನಿಸಿದರು.
ಬೆಳಗಾವಿಯಲ್ಲಿ ಸಾವನ್ನಪ್ಪಿದ ಬಾಣಂತಿ ಜ್ಯೋತಿ ಎಂಬುವರ ಪತಿಯು ಆತಹತ್ಯೆಗೆ ಯತ್ನಿಸಿ ಐಸಿಯುವಿನಲ್ಲಿದ್ದಾರೆ. 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ ಎಂದು ಬೀಗುತ್ತಿರುವ ಸರ್ಕಾರ, ಬಾಣಂತಿಯರಿಗೆ ಆತಹತ್ಯೆ ಮಾಡಿಕೊಳ್ಳಿ ಎನ್ನುವ ಭಾಗ್ಯ ಕೊಟ್ಟಿಲ್ಲ ಎಂಬುದೇ ಅಚ್ಚರಿ. ಸತ್ತ ಬಾಣಂತಿಯರ ಕುಟುಂಬ ನೋವಿನಲ್ಲಿ ಮುಳುಗಿದೆ. ಕಡೆ ಪಕ್ಷ ಅವರನ್ನು ಭೇಟಿಯಾಗಿ ಸಾಂತ್ವನ ಹೇಳುವ ಕೆಲಸವೂ ಆಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಈಗಲೂ ಹೇಳುತ್ತೇನೆ. ಮುಂದೆಯೂ ಹೇಳುತ್ತೇನೆ. ಸರ್ಕಾರ ಡ್ರಗ್ ಮಾಫಿಯಾಕ್ಕೆ ಮಣಿದಿದೆ. ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಲೂ ಕೂಡ ಸರ್ಕಾರಕ್ಕೆ ಯೋಗ್ಯತೆಯಿಲ್ಲ. ಕಪ್ಪುಪಟ್ಟಿಗೆ ಸೇರಿಸಿದ ಕಂಪನಿಗಳ ಜೊತೆಗೆ ಶಾಮೀಲಾಗಿ ವಸೂಲಿ ಮಾಡುವುದೇ ಇವರ ಕಾಯಕವಾಗಿದೆ.ಸರ್ಕಾರದ ಲೋಪದೋಷಗಳು ನಿಮ ಅವಧಿಯಲ್ಲಿ ನಡೆದಿಲ್ಲವೇ ಎಂದು ಪ್ರಶ್ನೆ ಮಾಡುತ್ತಾರೆ ಎಂದು ಕಿಡಿಕಾರಿದರು.
ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಸಂಭವಿಸಿದಾಗ ಕಾಂಗ್ರೆಸ್ ನಾಯಕರು ತೆರಳಿ ಮೊಸಳೆ ಕಣ್ಣೀರು ಸುರಿಸಿದರು. ಹಾಸನದ ಸಮಾವೇಶದ ವೇಳೆ ಬಾಣಂತಿಯರು ಸತ್ತರು. ಅವರ ಮನೆಗಳಿಗೆ ನೀವು ಏಕೆ ಭೇಟಿ ಕೊಡಲಿಲ್ಲ. ಕನಿಷ್ಠ ಪಕ್ಷ ಒಂದು ಸಾಂತ್ವನವನ್ನೂ ಹೇಳಲಿಲ್ಲ. ನಿಮ ಕಣ್ಣೀರು ಬತ್ತಿ ಹೋಗಿತ್ತೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಎಷ್ಟು ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ನಿಖರವಾದ ಮಾಹಿತಿ ಸಿಗಬೇಕು. ಅಧಿವೇಶನದಲ್ಲಿ ಕೊಟ್ಟ ಉತ್ತರ ತೃಪ್ತಿಕರ ತಂದಿಲ್ಲ. ಕಳಪೆ ಔಷಧಿಗೆ ಕಾರಣರಾದ ಕಂಪನಿಗಳ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಬೇಕು. ಜಿಲ್ಲಾಸ್ಪತ್ರೆಗಳು ಬಾಣಂತಿಯರ ಸಾವಿನ ಕೇಂದ್ರಗಳಾಗಿವೆ ಎಂದು ಅಶೋಕ್ ಕಿಡಿಕಾರಿದರು.
ಆಸ್ಪತ್ರೆಗಳಲ್ಲಿ ಬಾಣಂತಿಯರು ಸಾವನ್ನಪ್ಪಿದರೆ ಕುಟಂಬದವರ ಮೇಲೆ ವೈದ್ಯರು ಒತ್ತಡ ಹಾಕಿ ಬೀಗ ಜಡಿದು ನಂತರ ಯಾರೂ ಇಲ್ಲದ ಸಮಯದಲ್ಲಿ ಶವ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪಂಚ ಗ್ಯಾರಂಟಿಗಳ ಜೊತೆ ಬಾಣಂತಿಯರಿಗೆ ಬದುಕಿನ ಗ್ಯಾರಂಟಿಯನ್ನು ಕೊಡಬೇಕು. ಹೆಣ್ಣುಮಕ್ಕಳಿಗೆ 2 ಸಾವಿರ ರೂ. ಕೊಡುತ್ತೇನೆ ಎಂದು ಹೇಳುತ್ತಿರುವ ಸಿಎಂ ಸಿದ್ದರಾಮಯ್ಯನವರು ಮೊದಲು ಸಾವು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಯೋಗೀಶ್ ಗೌಡ ಕೊಲೆ ಪ್ರಕರಣ ವಿಚಾರವಾಗಿ ಮಾತನಾಡಿದ ಅಶೋಕ್, ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಸಾಕ್ಷ್ಯಗಳು ಸಿಬಿಐನವರಿಗೆ ಲಭ್ಯವಾಗಿವೆ. ಆರೋಪಿಯಾಗಿರುವ ವಿನಯ್ಕುಲಕರ್ಣಿ ಅಂದು ತಮ ಹಿಂಬಾಲಕರ ಮೂಲಕ ಕೊಲೆ ಮಾಡಿಸಿದ್ದಾರೆ ಎಂಬುದು ತನಿಖೆಯಿಂದ ಸಾಬೀತಾಗಿದೆ.
ನಮಗೆ ಅವರು ಸಾಕ್ಷಿಗಳನ್ನು ಕೊಡಿ ಎಂದು ಕೇಳುತ್ತಿದ್ದರು. ಈಗ ಎಲ್ಲವೂ ಬಹಿರಂಗಗೊಂಡಿವೆ. ತಮ ರಕ್ಷಣೆಗಾಗಿ ವಿನಯ್ಕುಲಕರ್ಣಿ ಎಂಎಲ್ಎಗಳ ತಂಡ ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಏನು ಹೇಳುತ್ತದೆ? ಎಂದು ಅಶೋಕ್ ಪ್ರಶ್ನಿಸಿದರು.
ಅಂದು ಬಿಜೆಪಿ ಸರ್ಕಾರ ಇದ್ದಾಗ ಈಶ್ವರಪ್ಪನವರನ್ನು ಉದ್ದೇಶಿಸಿ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದರು. ಒಬ್ಬ ವ್ಯಕ್ತಿ ಆತಹತ್ಯೆ ನಿರ್ಧಾರಕ್ಕೆ ಬರಬೇಕು ಎಂದರೆ ಎಷ್ಟು ಕಷ್ಟಪಟ್ಟಿರಬಹುದು, ಎಷ್ಟು ಮಂದಿ ಬೀದಿಗೆ ಬಂದಿರಬಹುದು ಎಂದು ಪ್ರಿಯಾಂಕ್ ಪ್ರಶ್ನಿಸಿದ್ದರು. ಅದೇ ಪ್ರಿಯಾಂಕ್ ಖರ್ಗೆ ಈಗ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಲಿ ಎಂದು ಕಿಡಿಕಾರಿದ್ದಾರೆ.
ಎಐಸಿಸಿ ಅಧ್ಯಕ್ಷರ ಮಗ ಎಂದು ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲು ಸಿದ್ದರಾಮಯ್ಯ ನಡುಗುತ್ತಿದ್ದಾರೆ. ನಾವು ಬಟ್ಟೆ ಹರಿದುಕೊಳ್ಳುವುದಕ್ಕಿಂತ ಮೊದಲು ಅವರ ಬಟ್ಟೆ ಹರಿದು ಹೋಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.