Wednesday, July 30, 2025
Homeರಾಜ್ಯನಟಿ ರಮ್ಯಾ ವಿರುದ್ಧದ ಅವಹೇಳನಕಾರಿ ಪೋಸ್ಟ್‌ಗಳ ವಿರುದ್ಧ ಗಂಭೀರ ಕ್ರಮ : ಪರಮೇಶ್ವರ್‌

ನಟಿ ರಮ್ಯಾ ವಿರುದ್ಧದ ಅವಹೇಳನಕಾರಿ ಪೋಸ್ಟ್‌ಗಳ ವಿರುದ್ಧ ಗಂಭೀರ ಕ್ರಮ : ಪರಮೇಶ್ವರ್‌

Serious action against derogatory posts against actress Ramya: Parameshwar

ಬೆಂಗಳೂರು, ಜು. 29– ನಟಿ ಹಾಗೂ ಮಾಜಿ ಸಂಸದೆ ರಮ್ಯಾ ವಿರುದ್ಧದ ಅವಹೇಳನಕಾರಿ ಪೋಸ್ಟ್‌ಗಳ ವಿರುದ್ಧ ಗಂಭೀರವಾದ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮ್ಯಾ ಅವರಷ್ಟೇ ಅಲ್ಲ,
ಯಾವುದೇ ಮಹಿಳೆಯ ವಿಚಾರವಾಗಿ ಈ ರೀತಿಯ ನಡವಳಿಕೆಗಳನ್ನು ಸಹಿಸಲಾಗುವುದಿಲ್ಲ. ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ನಗರ ಪೊಲೀಸ್‌‍ ಆಯುಕ್ತರು ಕೆಳಹಂತದ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ. ನಾನೂ ಕೂಡ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತೇನೆ ಎಂದು ಹೇಳಿದರು.

ಧರ್ಮಸ್ಥಳದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತನಿಖೆ ಮುಂದುವರೆಯುತ್ತಿದೆ. ಎಸ್‌‍ಐಟಿ ವಿಚಾರಣೆಯ ಹಂತದಲ್ಲಿ ಸರ್ಕಾರದ ವತಿಯಿಂದ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ ಎಂದರು. ಆರ್‌ಸಿಬಿ ಐಪಿಎಲ್‌ ಸರಣಿ ಗೆದ್ದ ಬಳಿಕ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಮೂವರು ಅಧಿಕಾರಿಗಳನ್ನು ಸಚಿವ ಸಂಪುಟಸಭೆಯ ನಿರ್ಣಯದ ಪ್ರಕಾರ ಮರು ನಿಯೋಜನೆ ಮಾಡಲಾಗಿದೆ ಎಂದರು.

ನ್ಯಾಯಮೂರ್ತಿ ಮೈಕಲ್‌ ಕುನ್ಹಾ ಪ್ರಕರಣದ ವಿಚಾರಣೆ ನಡೆಸಿ ವರದಿ ನೀಡಿದ್ದರು. ಅದನ್ನು ಆಧರಿಸಿ ಇಲಾಖೆಯ ವಿಚಾರಣೆಯನ್ನು ಮುಂದುವರೆಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಅಧಿಕಾರಿಗಳ ಅಮಾನತನ್ನು ಹಿಂಪಡೆಯಲಾಗಿದೆ. ಒಬ್ಬ ಐಪಿಎಸ್‌‍ ಅಧಿಕಾರಿ ಕೇಂದ್ರ ಆಡಳಿತಾತಕ ನ್ಯಾಯಾಧಿಕರಣದ ಮೊರೆ ಹೋಗಿದ್ದಾರೆ. ಹೀಗಾಗಿ ಅವರ ಅಮಾನತು ಹಿಂಪಡೆದಿಲ್ಲ. ನ್ಯಾಯಾಧಿಕರಣ ತೀರ್ಪು ನೀಡಿ ಬೇರೆಯವರ ರೀತಿ ಇವರ ಅಮಾನತನ್ನು ಹಿಂಪಡೆಯಿರಿ ಎಂದರೆ ಆಗ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಅಧಿಕಾರಿಗಳ ಅಮಾನತು ಆಡಳಿತಾತಕ ನಿರ್ಧಾರ. ಇದರಲ್ಲಿ ಸರ್ಕಾರಕ್ಕೆ ಹಿನ್ನಡೆ ಎಂಬ ಪ್ರಶ್ನೆಯೇ ಇಲ್ಲ. ತಪ್ಪು, ಸರಿ ಏನು ಎಂಬ ಬಗ್ಗೆ ವಿಚಾರಣೆ ಮುಂದುವರೆದಿದೆ. ಯಾವುದೇ ಒತ್ತಡಕ್ಕೆ ಮಣಿದು ಅಮಾನತು ಹಿಂಪಡೆದಿಲ್ಲ. ಬಿ.ದಯಾನಂದ ಅವರಿಗೆ ಅವರ ಶ್ರೇಣಿಗೆ ಸಮಾನಾಂತರವಾಗಿ ಹುದ್ದೆ ನೀಡಲಾಗುವುದು. ಮತ್ತೆ ಪೊಲೀಸ್‌‍ ಆಯುಕ್ತರ ಹುದ್ದೆ ನೀಡುವುದಿಲ್ಲ ಎಂದರು.

ರಸಗೊಬ್ಬರ ಕೊರತೆ ನಿಭಾಯಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭ್ರಷ್ಟಾಚಾರ ಅಥವಾ ಕಾಳಸಂತೆಯ ವಹಿವಾಟು ನಡೆಯುತ್ತಿದ್ದರೆ, ಅದರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು. ಕೃಷಿ ಸಚಿವ ಚಲವರಾಯಸ್ವಾಮಿ ಈಗಾಗಲೇ ಸೂಚನೆ ನೀಡಿ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುವುದು ಅಥವಾ ಕಾಳಸಂತೆ ವಹಿವಾಟು ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಅದರಂತೆ ಅಧಿಕಾರಿಗಳು ನಡೆದುಕೊಳ್ಳುತ್ತಾರೆ ಎಂದರು.

ಅವಧಿಪೂರ್ವ ಮುಂಗಾರಿನಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿ ಗೊಬ್ಬರದ ಬೇಡಿಕೆ ಹೆಚ್ಚಾಗಿದೆ. ಅಗತ್ಯದಷ್ಟು ಸರಬರಾಜು ಮಾಡಲು ನಾವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರವು ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು. ಸಕಾಲಕ್ಕೆ ಸಮರ್ಪಕ ರಸಗೊಬ್ಬರವನ್ನು ಪೂರೈಸಬೇಕು ಎಂದು ಹೇಳಿದರು.

ಕೃಷಿ ಸಚಿವರು ಜಿಲ್ಲೆಗಳಿಗೆ ಪ್ರವಾಸ ಮಾಡುವುದಕ್ಕಿಂತಲೂ ಬೇಡಿಕೆ ಹಾಗೂ ಬೆಳವಣಿಗೆಗಳ ಮೇಲೆ ನಿಗಾ ವಹಿಸುತ್ತಿದ್ದಾರೆ ಎಂದರು.ಮುಖ್ಯಮಂತ್ರಿಸಿದ್ದರಾಮಯ್ಯ ಇಂದಿನಿಂದ ಕಾಂಗ್ರೆಸ್‌‍ ಪಕ್ಷದ ಶಾಸಕರ ಜೊತೆ ಸಮಾಲೋಚನೆ ಸಭೆಗಳನ್ನು ನಡೆಸಲಿದ್ದಾರೆ. ಈ ಹಿಂದೆ 2013-18ರ ನಡುವೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಶಾಸಕರ ಜೊತೆ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ್ದರು. ಆಗ ನಾನು ಪಕ್ಷದ ಅಧ್ಯಕ್ಷನಾಗಿದ್ದೆ. ಈಗ ಸರ್ಕಾರ ರಚನೆಯಾಗಿ ಎರಡೂವರೆ ವರ್ಷ ಕಳೆದಿವೆ. ಮುಂದಿನ ದಿನಗಳಲ್ಲಿ ಯಾವೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಎಐಸಿಸಿಯ ಅಧ್ಯಕ್ಷರು ಸಭೆ ನಡೆಸಲು ಸೂಚನೆ ನೀಡಿದ್ದರೆ ಅದು ತಪ್ಪಲ್ಲ. ಚುನಾವಣೆಯನ್ನು ಸರ್ಕಾರವಾಗಿ ನಾವು ಎದುರಿಸಿಲ್ಲ, ಕಾಂಗ್ರೆಸ್‌‍ ಪಕ್ಷದಿಂದ ಚುನಾವಣೆ ನಡೆಸಲಾಗಿತ್ತು. ಆ ವೇಳೆ ನೀಡಿದ್ದ ಭರವಸೆಗಳ ಈಡೇರಿಕೆ ಬಗ್ಗೆ ಪಕ್ಷದ ಅಧ್ಯಕ್ಷರು ಪರಿಶೀಲನೆ ನಡೆಸುವುದು ತಪ್ಪಲ್ಲ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲಾ ಹುದ್ದೆಗಳಿಗೂ ಸಮರ್ಥರು. 50 ವರ್ಷಗಳ ಸುದೀರ್ಘ ಅನುಭವ ಇರುವವರು. ತಮ ಅನುಭವದ ಮೇಲೆ ಅವರು ನೀಡುವ ಹೇಳಿಕೆಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದು ಸರಿಯಲ್ಲ. ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಖರ್ಗೆಯವರ ಹೇಳಿಕೆಗಳ ಬಗ್ಗೆ ಟೀಕೆ ಮಾಡುವಷ್ಟರ ಮಟ್ಟಿಗೆ ಬೆಳೆದಿಲ್ಲ. ಆ ಹಂತಕ್ಕೆ ಬಂದಾಗ ಬೇಕಾದರೆ ಮಾತನಾಡಲಿ. ಖರ್ಗೆಯವರು ರಾಜ್ಯಕ್ಕಷ್ಟೇ ಅಲ್ಲ ರಾಷ್ಟ್ರದಲ್ಲೇ ಅತ್ಯಂತ ಹಿರಿಯ ಮುಖಂಡರು ಎಂದು ಹೇಳಿದರು.

ಖರ್ಗೆಯವರು ರಾಜ್ಯ ರಾಜಕಾರಣಕ್ಕೆ ಬರಬೇಕು, ಮುಖ್ಯಮಂತ್ರಿಯಾಗಬೇಕು ಎಂಬ ಹೇಳಿಕೆಗಳು ತಪ್ಪಲ್ಲ. ಯಾರು ಮುಖ್ಯಮಂತ್ರಿಯಾಗಬೇಕು ಎಂದು ನಿರ್ಧಾರ ಮಾಡುವುದೇ ಖರ್ಗೆಯವರು. ಒಂದು ವೇಳೆ ಅವರೇ ರಾಜ್ಯಕ್ಕೆ ಬರುವುದಾದರೆ ಯಾರೂ ವಿರೋಧಿಸುವುದಿಲ್ಲ ಎಂದರು.

RELATED ARTICLES

Latest News