ಬೆಳಗಾವಿ, ಡಿ.9- ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನಕ್ಕೆ ಬರುವ ಗಣ್ಯರಿಗೆ ಸ್ವಾಗತ ಕೋರುವ ಪ್ಲೆಕ್ಸ್, ಭ್ಯಾನರ್, ಹೋರ್ಡಿಂಗ್ಸ್ ಗಳ ಭರಾಟೆ ಜೋರಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಪ್ರತಿಪಕ್ಷಗಳ ನಾಯಕರು, ರಾಜಕೀಯ ಪಕ್ಷಗಳ ನಾಯಕರು ಹಾಗೂ ಮುಖಂಡರಿಗೆ ಸ್ವಾಗತ ಕೋರುವ ಪ್ಲೆಕ್ಸ್ ಗಳು ರಾರಾಜಿಸುತ್ತಿವೆ.
ಅಧಿವೇಶನ ನಡೆಯುವುದು ಸುವರ್ಣ ವಿಧಾನಸೌಧದಲ್ಲಾದರೂ ಬೆಳಗಾವಿ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ರಾಜಕೀಯ ಪಕ್ಷಗಳ ನಾಯಕರ ಭಾವಚಿತ್ರವುಳ್ಳ ಹಾಗೂ ಸ್ವಾಗತಕೋರುವ ಪ್ಲೆಕ್ಸ್ ಗಳೇ ಎದ್ದು ಕಾಣುತ್ತವೆ.ಅದರಲ್ಲೂ ಆಡಳಿತ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಪ್ಲೆಕ್ಸ್ ಗಳೇ ಹೆಚ್ಚಾಗಿವೆ. ಪ್ರತಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮುಖಂಡರ ಪ್ಲೆಕ್‌್ಸಗಳು ಕಡಿಮೆ ಇವೆ.
ಸುವರ್ಣ ವಿಧಾನಸೌಧದ ಮುಂಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಇಂತಹ ಪ್ಲೆಕ್ಸ್ ಗಳ ಮಹಾಪೂರವೇ ಇದೆ. ವಿಶೇಷವೆಂದರೆ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ಹೆಚ್ಚಿನ ಪ್ರಮಾಣದಲ್ಲಿ ಸ್ವಾಗತ ಕೋರುವ ಪ್ಲೆಕ್ಸ್ಗಳನ್ನು ಹಾಕಿರುವುದು ಎದ್ದು ಕಾಣುತ್ತವೆ.
ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಸತ್ತೀಶ್ ಜಾರಕಿಹೊಳ್ಳಿ, ಬೆಳಗಾವಿ ಜಿಲ್ಲೆ ಪ್ರತಿನಿಧಿಸುವ ಸಚಿವರಾದ ಲಕ್ಷೀ ಹೆಬ್ಬಾಳ್ಕರ್ ಹಾಗೂ ಸ್ಥಳೀಯ ಶಾಸಕರ ಪ್ಲೆಕ್‌್ಸಗಳು ಸಾಕಷ್ಟಿವೆ.
ಇದೊಂದು ರೀತಿ ಪ್ರಚಾರ ಪಡೆಯುವ ಅಬ್ಬರದಂತೆ ಕಂಡುಬರುತ್ತಿದೆ. ನಗರದಿಂದ ಸುವರ್ಣ ವಿಧಾನಸೌಧಕ್ಕೆ ಸಾಗುವ ಪ್ರಮುಖ ರಸ್ತೆಗಳು ಪ್ಲೆಕ್‌್ಸ ಮಯವಾಗಿವೆ.