ತಿರುಪತಿ,ಜ.9- ಶ್ರೀಕ್ಷೇತ್ರ ತಿರುಪತಿಯಲ್ಲಿ ಕಳೆದ ರಾತ್ರಿ ಕಾಲ್ತುಳಿತದಿಂದ ಉಂಟಾದ ನೂಕುನುಗ್ಗಲಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿದ್ದು, ಗಾಯಗೊಂಡಿರುವ ನಾಲ್ವರ ಸ್ಥಿತಿ ಈಗಲೂ ಗಂಭಿರವಾಗಿದೆ.
ಈ ನಡುವೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ 7 ಮಂದಿಯಲ್ಲಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ನಿರ್ಮಲಾ (50) ಸೇರಿದ್ದಾರೆ ಎನ್ನಲಾಗಿದೆ. ಆದರೆ ಇದನ್ನು ಟಿಟಿಡಿ ನಿರಾಕರಿಸಿದೆ. ಮೃತರು ವಿಶಾಖಪಟ್ಟಣದ ರಜನಿ(47), ಲಾವಣ್ಯ(40), ಶಾಂತಿ, ತಮಿಳುನಾಡಿನ ಸೇಲಂನ ಮಲ್ಲಿಕಾ (49), ನರಸೀಪಟ್ಟಣದ ನಾಯ್ಡುಬಾಬು (59) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಒಟ್ಟು 40 ಮಂದಿ ಭಕ್ತರು ಗಾಯಗೊಂಡಿದ್ದು, ಗಂಭೀರವಾಗಿರುವವರನ್ನು ಹೆಲಿಕಾಫ್ಟರ್ ಮೂಲಕ ಹೈದ್ರಾಬಾದ್‌ನಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಮೃತರ ಕುಟುಂಬಕ್ಕೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಲಾ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಗಾಯಾಳುಗಳಿಗೆ ಉಚಿತವಾಗಿ ಸರ್ಕಾರದ ವತಿಯಿಂದಲೇ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ.
ಈ ನಡುವೆ ಮೃತರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಘಟನೆಯ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಶ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಜಯಶಂಕರ್, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಮಾಜಿ ಸಿಎಂ ಜಗಮೋಹನರೆಡ್ಡಿ ಸೇರಿದಂತೆ ಅನೇಕ ಗಣ್ಯರು ದಿಗ್ಭ್ರಾಂತಿ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಆಂಧ್ರಪ್ರದೇಶ ಸರ್ಕಾರ ಭಕ್ತರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸಲು ಸಿದ್ಧವಿದೆ ಎಂದು ಹೇಳಿದ್ದಾರೆ. ತಮೆಲ್ಲಾ ಕಾರ್ಯಕ್ರಮಗಳನ್ನೂ ಬದಿಗೊತ್ತಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್‌ಕಲ್ಯಾಣ್, ತಿರುಪತಿಗೆ ಆಗಮಿಸಿ ಘಟನೆ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಭಕ್ತರ ಆಕ್ರೋಶ :
ಘಟನೆ ಬಗ್ಗೆ ದೇಶ-ವಿದೇಶದಿಂದ ಆಗಮಿಸಿರುವ ಸಾವಿರಾರು ಭಕ್ತರು ಟಿಟಿಡಿ ಅವ್ಯವಸ್ಥೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ವೈಕುಂಠ ಏಕಾದಶಿ ಪ್ರಯುಕ್ತ ಹಲವಾರು ಭಾಗಗಳಿಂದ ಭಾರಿ ಸಂಖ್ಯೆಯ ಭಕ್ತರು ಆಗಮಿಸುತ್ತಿರುವುದು ಗೊತ್ತಿರುವುದು ಯಾವುದೇ ರೀತಿಯ ಪೂರ್ವಸಿದ್ಧತೆಗಳನ್ನು ಕೈಗೊಂಡಿರಲಿಲ್ಲ ಎಂದು ನೊಂದ ಭಕ್ತರು ಅಳಲು ತೋಡಿಕೊಂಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದರು. ಏಕಾಏಕಿ ವಿಶೇಷ ದರ್ಶನಕ್ಕಾಗಿ ಟಿಕೆಟ್‌ಗಳನ್ನು ನೀಡಲಾಗುತ್ತದೆ ಎಂದು ಮೈಕ್‌ನಲ್ಲಿ ಪ್ರಕಟಿಸಿದರು. ಹೀಗಾಗಿ ದಿಢೀರನೇ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಯಿತು ಎಂದು ಭಕ್ತರು ನೋವು ಹೊರಹಾಕಿದ್ದಾರೆ.
ಘಟನೆ ಬಗ್ಗೆ ಕ್ಷಣಕ್ಷಣಕ್ಕೂ ಮಾಹಿತಿ ಪಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಖುದ್ದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಟಿಟಿಡಿ ಅಧ್ಯಕ್ಷರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಗಾಯಾಳುಗಳಿಗೆ ಸೂಕ್ತವಾದ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದ್ದಾರೆ. ಪ್ರಧಾನಿಯವರ ಸೂಚನೆಯಂತೆ ಗಾಯಾಳುಗಳನ್ನು ತಕ್ಷಣವೇ ತಿರುಪತಿಯಿಂದ ಹೆಲಿಕಾಫ್ಟರ್ ಮೂಲಕ ಕರೆದೊಯ್ಯಲಾಗಿದೆ. ಇವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.
ಒಂದು ಅಂದಾಜಿನ ಪ್ರಕಾರ ತಿರುಪತಿಯಲ್ಲಿ ನಾಳೆ ನಡೆಯಲಿರುವ ವೈಕುಂಠ ಏಕಾದಶಿಯ ವಿಶೇಷ ಸಂದರ್ಭದ ದರ್ಶನಕ್ಕಾಗಿ ದೇಶ-ವಿದೇಶಗಳಿಂದ 7 ಲಕ್ಷ ಭಕ್ತರು ಸೇರಿದ್ದರು ಎನ್ನಲಾಗಿದೆ.
ಇಷ್ಟು ದೊಡ್ಡ ಸಂಖ್ಯೆಯ ಭಕ್ತರಿಗೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಲು ಟಿಟಿಡಿ ಭಕ್ತರಿಗೆ ಪೂರ್ವ ಸಿದ್ಧತೆ ಕೈಗೊಳ್ಳದಿರುವುದೇ ಈ ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.