ಬೆಂಗಳೂರು,ಮೇ24- ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣನಿಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಮತ್ತು ವೀಸಾ ಎರಡನ್ನೂ ರದ್ದುಪಡಿಸಬೇಕೆಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ(ಎಸ್‌ಐಟಿ) ಪತ್ರ ಬರೆದ ಬೆನ್ನಲ್ಲೇ ವಿದೇಶಾಂಗ ವ್ಯವಹಾರಗಳ ಇಲಾಖೆ ಶೋಕಾಸ್ ನೋಟಿಸ್ ನೀಡಿದೆ.
ಆದಷ್ಟು ಶೀಘ್ರ ನೀವು ಶೋಕಾಸ್ ನೋಟಿಸ್‌ಗೆ ಉತ್ತರ ನೀಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಶೋಕಾಸ್ ನೋಟಿಸ್‌ನಲ್ಲಿ ಎಚ್ಚರಿಸಿದೆ.ನೀವು ಶೋಕಾಸ್ ನೋಟಿಸ್‌ಗೆ ಸರಿಯಾದ ಉತ್ತರ ಕೊಡದಿದ್ದರೆ ನಿಮ ಪ್ರಯಾಣದ ಮೇಲೆ ನಿರ್ಬಂಧ ಹಾಕಬೇಕಾಗುತ್ತದೆ. ಮುಂದಿನ ಕಾನೂನಿನ ಬಿಕ್ಕಟ್ಟುಗಳಿಗೆ ನೀವೇ ಹೊಣೆಯಾಗುತ್ತೀರಿ ಎಂದು ಸೂಚನೆ ಕೊಡಲಾಗಿದೆ.
ಒಂದು ವೇಳೆ ಶೋಕಾಸ್ ನೋಟಿಸ್‌ಗೂ ಉತ್ತರ ನೀಡದಿದ್ದರೆ ಅವರಿಗೆ ಇನ್ನಷ್ಟು ಕಾನೂನಿನ ಕುಣಿಕೆ ಬಿಗಿಯಾಗಲಿದೆ. ವಿದೇಶಾಂಗ ವ್ಯವಹಾರಗಳ ಪಾಸ್‌ಪೋರ್ಟ್ ರದ್ದುಗೊಂಡರೆ ವಿಧಿ ಇಲ್ಲದೆ ಶರಣಾಗಬೇಕು ಇಲ್ಲವೇ ತನಿಖಾ ಸಂಸ್ಥೆಗಳ ಮೂಲಕ ಬಂಧನಕ್ಕೊಳಪಡಬೇಕು.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರಮೋದಿ ಅವರಿಗೆ ಎರಡು ಪುಟಗಳ ಪತ್ರ ಬರೆದು ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಆರೋಪಗಳು ಗಂಭೀರವಾಗಿವೆ. ನೋಟೀಸ್ ನೀಡಿದರೂ ತನಿಖೆಗೆ ಸಹಕಾರ ಕೊಡುತ್ತಿಲ್ಲ. ವಿದೇಶದಲ್ಲಿರುವ ಅವರನ್ನು ಕರೆತರುವ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ಮತ್ತು ರಾಜತಾಂತ್ರಿಕ ವೀಸಾ ರದ್ದುಪಡಿಸಬೇಕೆಂದು ಮನವಿ ಮಾಡಿದ್ದರು.
ಇದರ ಬೆನ್ನಲ್ಲೇ ಎಸ್‌ಐಟಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದು, ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ವೀಸಾವನ್ನು ರದ್ದುಗೊಳಿಸುವಮತೆ ಒತ್ತಾಯಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಈಗಾಗಲೇ ಅವರಿಗೆ ಮೂರು ಬಾರಿ ನೋಟಿಸ್ ಜಾರಿ ಮಾಡಿತ್ತು. ಗೈರು ಹಾಜರಾದ ಹಿನ್ನಲೆಯಲ್ಲಿ ಕಾನೂನು ಕ್ರಮದ ಮೂಲಕವೇ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಹೊರಬಂದ ನಂತರ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿತ್ತು. ಯಾವಾಗ ಪೊಲೀಸರು ತಮನ್ನು ಬಂಧಿಸುತ್ತಾರೋ ಎಂಬುದು ಖಾತರಿಯಾಯಿತೋ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಪರಾರಿಯಾಗಿದ್ದರು. ಅಂದಿನಿಂದ ಇಂದಿನವರೆಗೂ ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.