ಹಾಸನ,ಅ.16-ವರ್ಷಕ್ಕೊಮೆ ದರ್ಶನ ಭಾಗ್ಯ ನೀಡುವ ಶಕ್ತಿ ದೇವತೆ ಹಾಸನಾಂಬ ದರ್ಶನಕ್ಕೆ ರಾಜ್ಯದ ವಿವಿಧ ಮೂಲಗಳಿಂದ ಲಕ್ಷಾಂತರ ಮಹಿಳಾ ಭಕ್ತರು ಆಗಮಿಸುತ್ತಿದ್ದು, ಶಕ್ತಿ ಯೋಜನೆ ವರದಾನವಾಗಿದೆ.ಸಾರ್ವಜನಿಕ ದರ್ಶನ ಪ್ರಾರಂಭವಾದ ಕಳೆದ 6 ದಿನಗಳಿಂದ ಭೇಟಿ ನೀಡಿದ ಭಕ್ತರಲ್ಲಿ ಶೇ.80 ರಷ್ಟು ಮಹಿಳಾ ಭಕ್ತರೆ ಇದ್ದಾರೆ. ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವಿರುವುದರಿಂದ ಕಳೆದ ವರ್ಷಕ್ಕಿಂತ ಈ ಭಾರಿ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ.
ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ, ರಾಯಚೂರು, ಯಾದಗಿರಿ,ದಾರವಾಡ, ಚಿತ್ರದುರ್ಗ, ತುಮಕೂರು, ಕೋಲಾರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆ ,ತಾಲ್ಲೂಕುಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ಆ.10 ರಿಂದ 15 ರ ವರೆಗೆ ಸುಮಾರು 8,84,503 ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಮಳೆ, ಗಾಳಿ, ಹಗಲು-ರಾತ್ರಿ ಲೆಕ್ಕಿಸದೇ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಪುನೀತರಾಗಿದ್ದಾರೆ. ಈ ಭಾರಿ ಜಿಲ್ಲಾಡಳಿತ ವತಿಯಿಂದ ಬಹಳ ಅಚ್ಚುಕಟ್ಟಾಗಿ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ನಿರಾಸದಾಯಕವಾಗಿ ದರ್ಶನ ಪಡೆಯುತ್ತಿದ್ದಾರೆ.
ಇನ್ನು 7 ದಿನಗಳ ಕಾಲ ದರ್ಶನಕ್ಕೆ ಅವಕಾಶವಿದ್ದು, ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.ಈ ಭಾರಿ ಚಲನಚಿತ್ರ ನಟ-ನಟಿಯರು ,ಜನಪ್ರತಿನಿಧಿಗಳು, ಗಣ್ಯರು ಭೇಟಿ ನೀಡಿ ಶಿಸ್ತಾಗಿ ಶಿಷ್ಟಾಚಾರ ಪಾಲನೆ ಮಾಡುತ್ತಾ ದರ್ಶನ ಪಡೆದಿದ್ದಾರೆ.
ದೇವಿಯ ಅಲಂಕಾರ ಬದಲಾವಣೆ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 2 ರಿಂದ 3.30 ರ ವರೆಗೆ ದರ್ಶನ ವಿರಲಿಲ್ಲ. ಅದೆ ರೀತಿ ರಾತ್ರಿ 12 ರಿಂದ ಬೆಳಗ್ಗೆ 5 ರವರೆಗೆ ದರ್ಶನ ಸೌಲಭ್ಯವಿರುವುದಿಲ್ಲ.
ಪುನಃ ನಾಳೆ ಬೆಳಗ್ಗೆ ಎಂದಿನಂತೆ ದರ್ಶನ ಸಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡ ರವರು ತಿಳಿಸಿದ್ದಾರೆ.