ಬೆಂಗಳೂರು, ಆ.19- ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಡಿ ಸಾರಿಗೆ ನಿಗಮಗಳ ಬಸ್ಗಳಲ್ಲಿ 500 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುವುದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಮಹತ್ವಾಕಾಂಕ್ಷೆಯ ಹಾಗೂ ಮಹಿಳಾ ಸಬಲೀಕರಣದ ದಿಟ್ಟ ಯೋಜನೆ ಶಕ್ತಿ ಯೋಜನೆ ಗೋಲ್ಡನ್ ಬುಕ್ ಆಫ್ ವರ್ಲ್್ಡ ರೆಕಾರ್ಡ್ನಲ್ಲಿ ಸ್ಥಾನ ಪಡೆದಿರುವುದು ಹೆಚ್ಚಿನ ಸಂತಸ ಮತ್ತು ಹೆಮೆಯ ವಿಷಯವಾಗಿದೆ.
ಕಳೆದ 2023ರ ಜೂನ್ 11ರಿಂದ 2025ರ ಜುಲೈ 25ರ ವರೆಗೆ ಸುಮಾರು 500 ಕೋಟಿಗಿಂತ ಹೆಚ್ಚು ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿರುವುದು ವಿಶ್ವದಾಖಲೆ ಮಾಡಿದೆ ಎಂದಿದ್ದಾರೆ.
ದೇಶದಲ್ಲೇ ಪ್ರಪ್ರಥಮ ಬಾರಿಗೆ ಜಾರಿಗೆ ತಂದ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆ ಅತ್ಯಂತ ಸವಾಲಿನಿಂದ ಕೂಡಿತ್ತು. ಸಂದಿಗ್ಧ ಪರಿಸ್ಥಿತಿಯಲ್ಲೂ ಸಹ ನಮ ತಂಡ ಕರ್ತವ್ಯ ನಿರ್ವಹಿಸಿ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ತೃಪ್ತಿ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ ಸಮಸ್ತ ಸಿಬ್ಬಂದಿಗಳ ಪರಿಶ್ರಮ, ಕಾರ್ಯತತ್ಪರತೆ ಹಾಗೂ ಕಾರ್ಮಿಕ ಮುಖಂಡರ ಸಹಕಾರವನ್ನು ಮರೆಯುವಂತಿಲ್ಲ. ಸವಾಲಿನ ಪರಿಸ್ಥಿತಿಯಲ್ಲೂ ಸಹ ಯೋಜನೆಯನ್ನು ಸಮರ್ಪಕವಾಗಿ ಮುನ್ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಶಕ್ತಿ ಯೋಜನೆಯು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಔದ್ಯೋಗಿಕವಾಗಿ ಮಹಿಳೆಯರನ್ನು ಸಬಲರನ್ನಾಗಿಸುತ್ತದೆ ಎಂದು ಬಲವಾಗಿ ನಂಬಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹಕಾರ ಈ ದಾಖಲೆಗೆ ಸಾಕ್ಷಿಯಾಗಿದೆ ಎಂದರು.
ಎರಡು ವರ್ಷಗಳ ಶಕ್ತಿ ಯೋಜನೆ ಹಾದಿಯಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 5800 ಹೊಸ ಸಾರಿಗೆ ಬಸ್ಗಳ ಸೇರ್ಪಡೆ, 10 ಸಾವಿರ ಹೊಸ ನೇಮಕಾತಿ, ಸಾಲ ಮರುಪಾವತಿಸಲು ಸರ್ಕಾರದಿಂದ ಎರಡು ಸಾವಿರ ಕೋಟಿ ರೂ. ಸಹಾಯ, ಸಾರಿಗೆ ಸಂಸ್ಥೆಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ, ಇತರೆ ಆಮೂಲಾಗ್ರ ಬದಲಾವಣೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.