ಬೆಂಗಳೂರು,ಜು.24- ಬಜೆಟ್‌ನಲ್ಲಿ ಸಾಕಷ್ಟು ಅನುದಾನದ ಲಭ್ಯತೆ ಇರುವುದರಿಂದ ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳಿಗೆ ಯಾವುದೇ ರೀತಿಯ ಹೊರೆಯಾಗುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಸ್ಪಷ್ಟಪಡಿಸಿದ್ದಾರೆ. ವಿಧಾನಪರಿಷತ್‌ನಲ್ಲಿ ಸದಸ್ಯೆ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ 1,400 ಕೋಟಿ ಅನುದಾನವನ್ನು ನೀಡಿದ್ದಾರೆ. ಹಣಕಾಸಿನ ಲಭ್ಯತೆ ಮೇಲೆ ನಾವು ಸಾರಿಗೆ ನಿಗಮಗಳಿಗೆ ಹಣವನ್ನು ನೀಡುತ್ತೇವೆ. ಹೀಗಾಗಿ ಯಾವುದೇ ಸಂಸ್ಥೆಗೂ ಹೊರೆಯಾಗುವುದಿಲ್ಲ ಎಂದು ಪುನರುಚ್ಚರಿಸಿದರು.
ಕರ್ನಾಟಕ ವಾಹನ ತೆರಿಗೆ ಕಾಯಿದೆಗೆ ವಿನಾಯಿತಿ ನೀಡಿದ್ದರಿಂದ ನನಗೆ 600 ಕೋಟಿ ಹೆಚ್ಚುವರಿ ಅನುದಾನ ಸಿಗಲಿದೆ. ಅಲ್ಲದೆ, ಬಸ್ ಖರೀದಿ ಮಾಡಲು 580 ಕೋಟಿ ಅನುದಾನವೂ ಸಿಗಲಿದೆ. ಸಂಸ್ಥೆಯು ಈಗ ಸುಧಾರಣೆಯತ್ತ ಸಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹತ್ತು ವರ್ಷಗಳ ಹಿಂದೆ ಟಿಕೆಟ್ ದರವನ್ನು ಹೆಚ್ಚಳ ಮಾಡಲಾಗಿತ್ತು. ಬಿಎಂಟಿಸಿಯಲ್ಲಿ ನಾಲ್ಕು ವರ್ಷಗಳಿಂದ ನಾವು ಟಿಕೆಟ್ ದರವನ್ನು ನಾವು ಪರಿಷ್ಕರಣೆ ಮಾಡಿಲ್ಲ. ಈ ಮೊದಲು ನೌಕರರಿಗೆ ನಿಗಮದಲ್ಲಿ ವೇತನ ನೀಡಲು ಹಿಂದೆಮುಂದೆ ನೋಡಬೇಕಾದ ಪರಿಸ್ಥಿತಿ ಇತ್ತು. ಈಗ ಸಾಕಷ್ಟು ಸುಧಾರಣೆಯಾಗಿದೆ ಎಂದರು.
ಬಾಕಿ ಇರುವ 1,413 ಕೋಟಿ ಹಣವನ್ನು ಹಂತಹಂತವಾಗಿ ಪಾವತಿ ಮಾಡುತ್ತೇವೆ. ನನಗೆ ಆಯವ್ಯವದಲ್ಲಿ ಹಣ ಇರುವುದರಿಂದ ಸಮಸ್ಯೆ ಪ್ರಶ್ನೆ ಉದ್ಭವಿಸುವುದೇ ಇಲ್ಲ ಹಾಗೂ ಶಕ್ತಿ ಯೋಜನೆ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.